ಕರ್ನಾಟಕದಲ್ಲಿ ಮತಪಟ್ಟಿ ಪರಿಷ್ಕರಣೆ ಬಹುತೇಕ ಪೂರ್ಣ; ಕೋಟಿಗೂ ಅಧಿಕ ಹೆಸರುಗಳಿಗೆ ಕತ್ತರಿ?

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ರಾಜ್ಯದಲ್ಲಿ 1.11 ಕೋಟಿಗೂ ಹೆಚ್ಚು ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಆದರೆ ಯಾವುದೇ ಕಾರಣವಿಲ್ಲದೆ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಅಗತ್ಯ ತಿದ್ದುಪಡಿಗಳಿಗೆ ಅವಕಾಶ
SIR ಪ್ರಕ್ರಿಯೆಯಲ್ಲಿ ಮತದಾರರನ್ನು ASDDO (Absent, Shifted, Dead, Duplicate and Others) ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಪಟ್ಟಿಯಲ್ಲಿರುವ ಮತದಾರರಿಗೆ ತಮ್ಮ ಹೆಸರುಗಳನ್ನು ಮರುಪರಿಶೀಲನೆ ಮಾಡಿಕೊಳ್ಳಲು ಹಾಗೂ ಅಗತ್ಯ ತಿದ್ದುಪಡಿಗಳಿಗೆ ಅವಕಾಶ ನೀಡಲಾಗುತ್ತದೆ.
ಇನ್ನೂ 22,972 ಫಾರಂಗಳ ಪರಿಶೀಲನೆ ಬಾಕಿ
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿಗೆ ಎನ್ಯೂಮರೇಷನ್ ಫಾರಂ ವಿತರಿಸಲಾಗಿತ್ತು. ಈ ಪೈಕಿ 5,53,93,875 ಫಾರಂಗಳ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ 22,972 ಫಾರಂಗಳ ಪರಿಶೀಲನೆ ಬಾಕಿಯಿದೆ. ಪೂರ್ಣಗೊಂಡಿರುವ ಫಾರಂಗಳ ಪೈಕಿ ಶೇ.79ರಷ್ಟು ಅಂದರೆ 4,43,04,632 ಮತದಾರರು ಫಾರಂ ಸಲ್ಲಿಸಿದ್ದಾರೆ. ಇವರ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ.
ಇದನ್ನು ಓದಿ : ರಾಜ್ಯದಲ್ಲಿ ಮತಪಟ್ಟಿಯಿಂದ 1 ಕೋಟಿ ಮತದಾರರಿಗೆ ಶಾಕ್..!

1.11 ಕೋಟಿ ಮತದಾರರು ASDDO ಪಟ್ಟಿಯಲ್ಲಿ
SIR ಪ್ರಕ್ರಿಯೆಯಲ್ಲಿ ಒಟ್ಟು 1,11,47,705 ಮತದಾರರನ್ನು ASDDO ಪಟ್ಟಿಗೆ ಸೇರಿಸಲಾಗಿದೆ.
ವಿಭಾಗವಾರು ವಿವರ:
- Absent (ಗೈರಾದವರು): 14,30,012
- Shifted (ಸ್ಥಳಾಂತರಗೊಂಡವರು): 66,64,943
- Dead (ಮೃತಪಟ್ಟವರು): 16,30,872
- Duplicate (ನಕಲಿ/ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು): 6,89,904
- Others (ಇತರೆ ಕಾರಣಗಳು): 4,88,974
ಬೆಂಗಳೂರಿನಲ್ಲಿ 49 ಲಕ್ಷಕ್ಕೂ ಹೆಚ್ಚು ಹೆಸರುಗಳು
ರಾಜಧಾನಿ ಬೆಂಗಳೂರಿನಲ್ಲಿ ASDDO ಪಟ್ಟಿಗೆ ಸೇರಿದ ಮತದಾರರ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ಒಟ್ಟು 1,03,88,363 ಮತದಾರರಿಗೆ ಎನ್ಯೂಮರೇಷನ್ ಫಾರಂ ನೀಡಲಾಗಿತ್ತು.
ಇದರಲ್ಲಿ 49,42,750 ಮತದಾರರನ್ನು ASDDO ಪಟ್ಟಿಗೆ ಸೇರಿಸಲಾಗಿದೆ.

ಬೆಂಗಳೂರಿನ ವಿಭಾಗವಾರು ವಿವರ:
- Absent: 7,96,277
- Shifted: 33,80,013
- Dead: 3,15,335
- Duplicate: 60,092
- Others: 3,91,033
ಆಗಸ್ಟ್ 8ರ ಬಳಿಕ ಅಂತಿಮ ಮಾಹಿತಿ
SIR ಪ್ರಕ್ರಿಯೆಯಲ್ಲಿ ಉಳಿದಿರುವ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡ ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅಂತಿಮ ಅಂಕಿ-ಅಂಶಗಳು ಆಗಸ್ಟ್ 8ರ ನಂತರ ಬಿಡುಗಡೆಯಾಗುವ ಸಾಧ್ಯತೆ ಇದೆ.
ASDDO ಪಟ್ಟಿಯಲ್ಲಿ ಹೆಸರು ಇರುವ ಮತದಾರರಿಗೆ ತಮ್ಮ ಹೆಸರುಗಳನ್ನು ಮರುಸೇರ್ಪಡೆ ಮಾಡಿಕೊಳ್ಳಲು ಹಾಗೂ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ವಿಳಾಸ ಬದಲಾವಣೆ ಅಥವಾ ಇತರೆ ತಿದ್ದುಪಡಿಗಳಿಗಾಗಿ Form 6 ಮತ್ತು Form 8 ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನು ನೋಡಿ : ಮಳೆಗಾಗಿ ಕತ್ತೆಗಳ ಅದ್ಧೂರಿ ಮದುವೆ – ಶಾಸ್ತ್ರೋಕ್ತ ಮದುವೆ ಬಳಿಕ ಮೆರವಣಿಗೆ




