
9 ತಿಂಗಳಲ್ಲಿ 9 ಕೋಟಿ ಭಕ್ತರ ಹಸಿವು ನೀಗಿಸಿದ ತಿರುಮಲ: ಅನ್ನದಾನದಲ್ಲಿ TTD ಸಾರ್ವಕಾಲಿಕ ದಾಖಲೆ!
ಕಲಿಯುಗ ವೈಕುಂಠ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ದೇಶ-ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ ಉಚಿತವಾಗಿ ಅನ್ನಪ್ರಸಾದ ವಿತರಿಸುತ್ತಿದೆ. ವಿಶೇಷ ಅಂದ್ರೆ, 2026ರ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗಿನ ಕೇವಲ 9 ತಿಂಗಳಲ್ಲಿ ಬರೋಬ್ಬರಿ 9 ಕೋಟಿಗೂ ಹೆಚ್ಚು ಭಕ್ತರಿಗೆ ಅನ್ನಪ್ರಸಾದ ಹಾಗೂ ಉಪಹಾರ ವಿತರಿಸಿರುವುದಾಗಿ TTD ಮಾಹಿತಿ ನೀಡಿದೆ.
ಪ್ರತಿದಿನ ಲಕ್ಷಾಂತರ ಭಕ್ತರಿಗೆ ಉಚಿತ ಊಟ
ಹೌದು.. ತಿರುಮಲದಲ್ಲಿ ಅನ್ನಪ್ರಸಾದ ಸೇವೆ ನಿರಂತರವಾಗಿ ನಡೆಯುತ್ತಿದೆ. ಸಾಮಾನ್ಯ ದಿನಗಳಲ್ಲಿ ಸುಮಾರು 1 ಲಕ್ಷದ 80 ಸಾವಿರದಿಂದ 1 ಲಕ್ಷದ 90 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಇನ್ನು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಈ ಸಂಖ್ಯೆ 3 ಲಕ್ಷಕ್ಕೂ ಹೆಚ್ಚಾಗುತ್ತದೆ. ಶ್ರೀವಾರಿ ದರ್ಶನಕ್ಕೆ ಬರುವ ಭಕ್ತರು ಹಸಿವಿನಿಂದ ಬಳಲಬಾರದು ಅನ್ನೋ ಉದ್ದೇಶದಿಂದ ಟಿಟಿಡಿ ಈ ಬೃಹತ್ ಅನ್ನದಾನ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ.

ಅನ್ನಪ್ರಸಾದ ಟ್ರಸ್ಟ್ನಲ್ಲಿ ₹2,900 ಕೋಟಿಗೂ ಹೆಚ್ಚು ಠೇವಣಿ
ಇನ್ನು ತಿರುಮಲದಲ್ಲಿ ಅನ್ನದಾನದ ಇತಿಹಾಸ ನಾಲ್ಕು ದಶಕಗಳಷ್ಟು ಹಳೆಯದು. 1985ರ ಏಪ್ರಿಲ್ 6ರಂದು ಅಂದಿನ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಟಿ. ರಾಮಾರಾವ್ ಅವರ ಪ್ರೇರಣೆಯಿಂದ ಶ್ರೀ ವೆಂಕಟೇಶ್ವರ ನಿತ್ಯಾನ್ನದಾನ ಯೋಜನೆ ಆರಂಭವಾಯ್ತು. ಬಳಿಕ 1994ರಲ್ಲಿ ಇದನ್ನು ಅಧಿಕೃತ ಟ್ರಸ್ಟ್ ಆಗಿ ಪರಿವರ್ತಿಸಲಾಯ್ತು. ಸದ್ಯ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್ ಹೆಸರಿನಲ್ಲಿ ಸೇವೆ ಮುಂದುವರಿದಿದ್ದು, ಭಕ್ತರ ದೇಣಿಗೆಯಿಂದ 2,900 ಕೋಟಿಗೂ ಹೆಚ್ಚು ರೂಪಾಯಿ ಸ್ಥಿರ ಠೇವಣಿ ಸಂಗ್ರಹವಾಗಿದೆ ಎಂದು ತಿಳಿಸಲಾಗಿದೆ.
ತಿರುಮಲದಲ್ಲಿ ಮೂರು ಬೃಹತ್ ಅಡುಗೆಮನೆಗಳು
ಇನ್ನು ಲಕ್ಷಾಂತರ ಭಕ್ತರಿಗೆ ಪ್ರತಿದಿನ ಆಹಾರ ಸಿದ್ಧಪಡಿಸಲು ತಿರುಮಲದಲ್ಲಿ ಮೂರು ಪ್ರಮುಖ ಅಡುಗೆಮನೆಗಳು ಕಾರ್ಯನಿರ್ವಹಿಸುತ್ತಿವೆ. ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರದಲ್ಲಿ ಪ್ರತಿದಿನ 80 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಉಪಹಾರ ಹಾಗೂ ಊಟ ನೀಡಲಾಗುತ್ತಿದೆ. ಇದರ ಜೊತೆಗೆ ಶ್ರೀ ಅಕ್ಷಯ ಅಡುಗೆಮನೆ ಮತ್ತು ವಕುಲಮಾತಾ ಅಡುಗೆಮನೆಗಳ ಮೂಲಕ ವಿವಿಧ ಪ್ರದೇಶಗಳಿಗೆ ಆಹಾರ ಪೂರೈಸಲಾಗುತ್ತಿದೆ.
READ THIS : ತಿರುಮಲದಲ್ಲಿ ಬ್ರಹ್ಮೋತ್ಸವ ಸಂಭ್ರಮ – ಸಾಮಾನ್ಯ ಭಕ್ತರಿಗೆ ದರ್ಶನದ ಆದ್ಯತೆ

ದರ್ಶನದ ಕ್ಯೂ ಲೈನ್ನಲ್ಲೂ ಅನ್ನಪ್ರಸಾದ ವಿತರಣೆ
ಇನ್ನು ಶ್ರೀವಾರಿ ದರ್ಶನಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೂ ಟಿಟಿಡಿ ಆಹಾರ ಒದಗಿಸುತ್ತಿದೆ.
ವೈಕುಂಠಂ ಕ್ಯೂ ಕಾಂಪ್ಲೆಕ್ಸ್, ನಾರಾಯಣಗಿರಿ ಶೆಡ್ಗಳು ಹಾಗೂ ವಿವಿಧ ಕ್ಯೂ ಲೈನ್ಗಳಲ್ಲಿ ಉಪಹಾರ ಮತ್ತು ಪಾನೀಯಗಳನ್ನು ವಿತರಿಸಲಾಗುತ್ತಿದೆ.
ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಾದಾಮಿ ಹಾಲು, ಮಜ್ಜಿಗೆ, ಬಿಸ್ಕತ್ತು ಮತ್ತು ಜ್ಯೂಸ್ಗಳನ್ನೂ ನೀಡಲಾಗುತ್ತಿದೆ.
ಪ್ರತಿದಿನ ಸುಮಾರು 16 ಟನ್ ಅಕ್ಕಿ ಬಳಕೆ
ಇನ್ನು ಈ ಬೃಹತ್ ಅನ್ನದಾನ ವ್ಯವಸ್ಥೆಗೆ ಪ್ರತಿದಿನ ಎಷ್ಟು ಆಹಾರ ಸಾಮಗ್ರಿ ಬೇಕಾಗುತ್ತೆ ಗೊತ್ತಾ..? ಸುಮಾರು 15 ಸಾವಿರದ 788 ಕೆಜಿ ಅಕ್ಕಿ, 3 ಸಾವಿರದ 110 ಕೆಜಿ ಸೂರ್ಯಕಾಂತಿ ಎಣ್ಣೆ, 2 ಸಾವಿರದ 861 ಕೆಜಿ ಬೇಳೆ ಸೇರಿದಂತೆ ಅಪಾರ ಪ್ರಮಾಣದ ಆಹಾರ ಸಾಮಗ್ರಿಗಳನ್ನು ಬಳಸಲಾಗುತ್ತಿದೆ.
ಇದರ ಜೊತೆಗೆ ರವೆ, ಉದ್ದು, ತೆಂಗಿನಕಾಯಿ ಹಾಗೂ ಇತರೆ ಪದಾರ್ಥಗಳನ್ನೂ ದೊಡ್ಡ ಪ್ರಮಾಣದಲ್ಲಿ ಅಡುಗೆಗೆ ಬಳಸಲಾಗುತ್ತಿದೆ.

ಅನ್ನದಾನ ಸೇವೆಗೆ ಆಧುನಿಕ ತಂತ್ರಜ್ಞಾನದ ನೆರವು
ಇನ್ನು ಅನ್ನಪ್ರಸಾದ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಟಿಟಿಡಿ ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಳ್ಳುತ್ತಿದೆ.
ಬೃಹತ್ ಅಡುಗೆ ಯಂತ್ರಗಳು, ಸ್ವಯಂಚಾಲಿತ ಅಡುಗೆ ವ್ಯವಸ್ಥೆಗಳು ಹಾಗೂ ವಿಶಾಲವಾದ ಊಟದ ಹಾಲ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸಾವಿರಕ್ಕೂ ಹೆಚ್ಚು ಶ್ರೀವಾರಿ ಸೇವಕರು ಅನ್ನಪ್ರಸಾದ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
MUST WATCH : ಸಿನಿಮಾ ರೆಡಿ ಮಾಡ್ತಿದ್ದಾರಂತೆ ಡಿಕೆಶಿ – ಕಥೆ ಯಾರದ್ದು ಹೇಳಿ ಎಂದ ರಾಮುಲು




