TUMAKURU : ದೇವರಾಯನದುರ್ಗದಲ್ಲಿ ಕಾಡು ಮನುಷ್ಯರು ಕಾಣಿಸಿಕೊಂಡದ್ದು ನಿಜವೇ?; ವೈರಲ್ ವಿಡಿಯೊ ಬಗ್ಗೆ ಪೊಲೀಸರು ಹೇಳಿದ್ದೇನು?

ತುಮಕೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣವಾದ ದೇವರಾಯನದುರ್ಗದಲ್ಲಿ ಇಬ್ಬರು ಕಾಡು ಮನುಷ್ಯರು ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಸಾರ್ವಜನಿಕರಲ್ಲಿ ಕುತೂಹಲದ ಜೊತೆಗೆ ಆತಂಕವೂ ಹೆಚ್ಚಾಗಿತ್ತು. ಆದ್ರೆ ಇದೀಗ ಈ ವೈರಲ್ ವಿಡಿಯೋ ಸಂಪೂರ್ಣ ಸುಳ್ಳು ಎಂದು ಜಿಲ್ಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕಾಡು ಮನುಷ್ಯರು ಕಾಣಿಸಿಕೊಂಡದ್ದು ನಿಜವೇ?
ಹೌದು.. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿತ್ತು. ದೇವರಾಯನದುರ್ಗದಲ್ಲಿ ಇದ್ದಕ್ಕಿದ್ದಂತೆ ಇಬ್ಬರು ಕಾಡು ಮನುಷ್ಯರು ಕಾಣಿಸಿಕೊಂಡಿದ್ದರು. ಅವರಿಗೆ ಯಾವುದೇ ತೊಂದರೆ ನೀಡದೇ ಅವರು ಮುಂದೆ ಹೋಗುವವರೆಗೂ ಸುಮ್ಮನಿದ್ದೆವು ಎಂದು ಬರೆದುಕೊಂಡು ಪೋಸ್ಟ್ ಮಾಡಲಾಗಿತ್ತು. ಇದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
READ THIS : ರೀಲ್ಸ್ ಹುಚ್ಚಾಟ – ಬೆಟ್ಟದಿಂದ ಬಿದ್ದ ಉಪನ್ಯಾಸಕ!

ವೈರಲ್ ವಿಡಿಯೊ ಬಗ್ಗೆ ಪೊಲೀಸರು ಹೇಳಿದ್ದೇನು?
ಇನ್ನು ಈ ವೈರಲ್ ವಿಡಿಯೋ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ತುಮಕೂರು ಜಿಲ್ಲಾ ಪೊಲೀಸರು, ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದಾರೆ. ಪರಿಶೀಲನೆ ಬಳಿಕ ದೇವರಾಯನದುರ್ಗದಲ್ಲಿ ಇಬ್ಬರು ಕಾಡು ಮನುಷ್ಯರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ನಕಲಿ ಎಂದು ಪೊಲೀಸರು ತಿಳಿಸಿದ್ದು, ಸಾರ್ವಜನಿಕರು ಇಂತಹ ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿದ್ದಾರೆ.
ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರತಿಯೊಂದು ವಿಡಿಯೋವನ್ನೂ ನಿಜವೆಂದು ನಂಬಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಯಾವುದೇ ವಿಡಿಯೋ ಅಥವಾ ಸುದ್ದಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಆಧಾರರಹಿತ ಮಾಹಿತಿಯನ್ನು ಹರಡುವುದರಿಂದ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

TUMAKURU – ಸುಳ್ಳು ಸುದ್ದಿ ಹರಡಿದ್ರೆ ಕ್ರಮ
ಇನ್ನು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರಲ್ಲಿ ಗೊಂದಲ ಹಾಗೂ ಆತಂಕ ಮೂಡಿಸುವಂತಹ ನಕಲಿ ವಿಡಿಯೋಗಳನ್ನು ಹಂಚಿಕೊಳ್ಳಬಾರದು ಎಂದು ಸೂಚಿಸಿದ್ದಾರೆ.
MUST WATCH : BIG DEBATE | ಕೇಂದ್ರದ ವಿರುದ್ದ ಕಬ್ಬು ಬೆಳೆಗಾರರ ಕಿಚ್ಚು, ಸರ್ಕಾರಕ್ಕೆ ಕೊಟ್ರು ಡೆಡ್ಲೈನ್..!




