ನೀವು ತಿನ್ನುವ ICE CREAM ಎಷ್ಟು ಸುರಕ್ಷಿತ? ಬೆಂಗಳೂರು ಸೇರಿ ರಾಜ್ಯಾದ್ಯಂತ ತಪಾಸಣೆ, ಬೆಚ್ಚಿಬೀಳಿಸುವ ಅಕ್ರಮಗಳು ಬಯಲು!

ಐಸ್ಕ್ರೀಂ ಪ್ರಿಯರೇ ಎಚ್ಚರ! ರಾಜ್ಯದ ವಿವಿಧೆಡೆ ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಲವು ಘಟಕಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಸುಮಾರು 45 ಘಟಕಗಳಲ್ಲಿ ತಪಾಸಣೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ ಘಟಕಗಳ ವಿರುದ್ಧ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
ಅವಧಿ ಮೀರಿದ ಪದಾರ್ಥಗಳು ಪತ್ತೆ
ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಬೆಂಗಳೂರು, ಮೈಸೂರು, ರಾಯಚೂರು ಸೇರಿದಂತೆ ರಾಜ್ಯದ ವಿವಿಧೆಡೆ ಐಸ್ಕ್ರೀಂ ತಯಾರಿಕಾ ಘಟಕಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕೆಲವು ಘಟಕಗಳಲ್ಲಿ ಅವಧಿ ಮೀರಿದ ಪದಾರ್ಥಗಳು, ಸೂಕ್ತ ಲೇಬಲ್ ಇಲ್ಲದ ಕಚ್ಚಾ ವಸ್ತುಗಳು ಹಾಗೂ ಸ್ವಚ್ಛತೆಯ ಕೊರತೆ ಕಂಡುಬಂದಿದೆ.
ನಿಯಮ ಉಲ್ಲಂಘನೆ ಹಿನ್ನೆಲೆ ಕಾನೂನು ಕ್ರಮ
ಇನ್ನು ಬೆಂಗಳೂರಿನ ಜಯನಗರ ಮೂರನೇ ಬ್ಲಾಕ್ನಲ್ಲಿರುವ ಐಸ್ಕ್ರೀಂ ತಯಾರಿಕಾ ಘಟಕವೊಂದರ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಪಾಸಣೆ ವೇಳೆ ಅವಧಿ ಮೀರಿದ ಬಿಸ್ಕೆಟ್ಗಳು, ಹಾಲು, ಟೀ ಮತ್ತು ಕಾಫಿ ಮಿಕ್ಸ್ ಹಾಗೂ ತೆಂಗಿನಕಾಯಿ ಪುಡಿ ಸೇರಿದಂತೆ ವಿವಿಧ ಪದಾರ್ಥಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಆಹಾರ ಪದಾರ್ಥಗಳ ಲೇಬಲಿಂಗ್ನಲ್ಲಿಯೂ ದೋಷಗಳು ಕಂಡುಬಂದಿದ್ದು, ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
READ THIS : Tumkur ನಲ್ಲಿ ಅನಧಿಕೃತ ಆಶ್ರಮದ ಮೇಲೆ ದಾಳಿ, 64 ಜನರ ರಕ್ಷಣೆ..!

ಬೆಂಗಳೂರಿನ ಐಸ್ಕ್ರೀಂ ಘಟಕದ ಮೇಲೂ ದಾಳಿ
ಅದೇ ರೀತಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿರುವ ಮತ್ತೊಂದು ಐಸ್ಕ್ರೀಂ ಘಟಕದಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕ್ಯಾರಮೆಲ್ ಪದಾರ್ಥ, ಮಿಲ್ಕ್ಮೇಡ್ ಹಾಗೂ ಖೋವಾ ಸೇರಿದಂತೆ ಕೆಲವು ಕಚ್ಚಾ ವಸ್ತುಗಳು ಅವಧಿ ಮೀರಿರುವುದು ಅಥವಾ ಸೂಕ್ತ ಲೇಬಲ್ ಹೊಂದಿಲ್ಲದಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ. ಐಸ್ಕ್ರೀಂ ತಯಾರಿಕೆಗೆ ಬಳಸುವ ಪದಾರ್ಥಗಳ ಸಂಗ್ರಹಣೆ ಹಾಗೂ ಗುಣಮಟ್ಟದ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.
ಸಂಬಂಧಪಟ್ಟ ಘಟಕಕ್ಕೆ ಅಧಿಕಾರಿಗಳು ನೋಟಿಸ್
ಇನ್ನು ರಾಯಚೂರಿನ ಐಸ್ಕ್ರೀಂ ತಯಾರಿಕಾ ಘಟಕವೊಂದರಲ್ಲೂ ಸ್ವಚ್ಛತೆಯ ಕೊರತೆ ಕಂಡುಬಂದಿದೆ ಎಂದು ವರದಿಯಾಗಿದೆ.
ಆಹಾರ ತಯಾರಿಕೆಗೆ ಅಗತ್ಯವಿರುವ ನೈರ್ಮಲ್ಯ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಘಟಕಕ್ಕೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.
ಮೈಸೂರಿನಲ್ಲಿ ಪರವಾನಗಿ ಇಲ್ಲದೆ ಐಸ್ಕ್ರೀಂ ತಯಾರಿಕೆ!
ಮೈಸೂರಿನಲ್ಲಿಯೂ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಘಟಕವೊಂದರಲ್ಲಿ ಸೂಕ್ತ ಪರವಾನಗಿ ಇಲ್ಲದೆ ಐಸ್ಕ್ರೀಂ ತಯಾರಿಸಲಾಗುತ್ತಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಅಲ್ಲದೆ ಲೇಬಲ್ ಇಲ್ಲದ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಐಸ್ಕ್ರೀಂ ಹಾಗೂ ಕಚ್ಚಾ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ರಾಜ್ಯದ ವಿವಿಧೆಡೆ ಐಸ್ಕ್ರೀಂ ತಯಾರಿಕಾ ಘಟಕಗಳಲ್ಲಿ ನಡೆದ ತಪಾಸಣೆ, ಆಹಾರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
MUST WATCH : ಸರ್ಕಾರಿ ಆಸ್ಪತ್ರೆಯಲ್ಲೇ ಮೆಡಿಸನ್ ಕೊರತೆ – ಆಸ್ಪತ್ರೆ ಸ್ಥಿತಿ ಕಂಡು ಜನರ ಆಕ್ರೋಶ




