
September 1ರಿಂದ ಐಟಿಆರ್, ವಿದೇಶ ಪ್ರಯಾಣ, ಎಫ್ಡಿ ಇತ್ಯಾದಿ ನಿಯಮ ಬದಲಾವಣೆಗಳಿವೆ, ಗಮನಿಸಿ
ಆಗಸ್ಟ್ ತಿಂಗಳು ಮುಕ್ತಾಯಗೊಂಡು ಸೆಪ್ಟೆಂಬರ್ ಆರಂಭವಾಗುತ್ತಿದ್ದು, ಹೊಸ ತಿಂಗಳೊಂದಿಗೆ ಹಲವು ಹಣಕಾಸು ನಿಯಮಗಳು, ಗಡುವುಗಳು ಹಾಗೂ ಸೇವಾ ಶುಲ್ಕಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಎಲ್ಪಿಜಿ ಇ-ಕೆವೈಸಿ, ಬ್ಯಾಂಕ್ಗಳ ಎಫ್ಡಿ ಬಡ್ಡಿದರ, ಇಂಧನ ಬೆಲೆ ಹಾಗೂ ಎಟಿಎಂ ವಹಿವಾಟು ಸೇರಿದಂತೆ ಹಲವು ವಿಷಯಗಳನ್ನು ಗ್ರಾಹಕರು ಗಮನಿಸಬೇಕಾಗಿದೆ.
1. ಐಟಿಆರ್ ಸಲ್ಲಿಕೆ ಗಡುವು ಮುಕ್ತಾಯ
ಆಡಿಟ್ ಅಗತ್ಯವಿಲ್ಲದ ತೆರಿಗೆದಾರರಿಗೆ 2026-27ನೇ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಈ ಗಡುವಿನೊಳಗೆ ರಿಟರ್ನ್ಸ್ ಸಲ್ಲಿಸದವರು ಸೆಪ್ಟೆಂಬರ್ 1ರಿಂದ ವಿಳಂಬ ರಿಟರ್ನ್ಸ್ (Belated ITR) ಸಲ್ಲಿಸಬೇಕಾಗುತ್ತದೆ. ವಿಳಂಬವಾಗಿ ಸಲ್ಲಿಸಿದಲ್ಲಿ ಅನ್ವಯಿಸುವ ಬಡ್ಡಿ ಮತ್ತು ದಂಡವನ್ನು ಪಾವತಿಸಬೇಕಾಗಬಹುದು.

2. ಎಲ್ಪಿಜಿ ಇ-ಕೆವೈಸಿ ಗಡುವು
ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಬಯೋಮೆಟ್ರಿಕ್ ಇ-ಕೆವೈಸಿ ಪೂರ್ಣಗೊಳಿಸಲು ನೀಡಿರುವ ಗಡುವು ಆಗಸ್ಟ್ 31ಕ್ಕೆ ಕೊನೆಗೊಳ್ಳಲಿದೆ. ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರಿಗೆ September 1ರಿಂದ ಎಲ್ಪಿಜಿ ಸಬ್ಸಿಡಿ ಅಥವಾ ಗೃಹಬಳಕೆ ಸಿಲಿಂಡರ್ ದರದ ಪ್ರಯೋಜನ ಪಡೆಯುವಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯಿದೆ.
ಇದರ ಜೊತೆಗೆ, ಪ್ರತಿ ತಿಂಗಳ ಮೊದಲ ದಿನದಂತೆ ಸೆಪ್ಟೆಂಬರ್ 1ರಂದು ಎಲ್ಪಿಜಿ ಸಿಲಿಂಡರ್ ದರದಲ್ಲೂ ಪರಿಷ್ಕರಣೆ ನಡೆಯುವ ಸಾಧ್ಯತೆಯಿದೆ.
3. ವಿದೇಶ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಮುದ್ರೆ ಅಗತ್ಯವಿಲ್ಲ
ಭಾರತದಿಂದ ವಿದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವವರಿಗೆ ಸೆಪ್ಟೆಂಬರ್ 1ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಇಮಿಗ್ರೇಷನ್ ಕೌಂಟರ್ನಲ್ಲಿ ಭೌತಿಕ ಬೋರ್ಡಿಂಗ್ ಪಾಸ್ಗೆ ಮುದ್ರೆ ಹಾಕಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿರುವ ಡಿಜಿಟಲ್ ಬೋರ್ಡಿಂಗ್ ಪಾಸ್ ತೋರಿಸುವ ಮೂಲಕ ನಿರ್ಗಮನ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.
READ THIS : ಜೂನ್ 1ರಿಂದ ರೈಲ್ವೆ ವೈಟಿಂಗ್ ಲಿಸ್ಟ್ ನಿಯಮಗಳಲ್ಲಿ ಬದಲಾವಣೆ

4. ಎಫ್ಡಿ ಬಡ್ಡಿದರಗಳಲ್ಲಿ ಬದಲಾವಣೆ ಸಾಧ್ಯತೆ
ಸೆಪ್ಟೆಂಬರ್ ತಿಂಗಳಲ್ಲಿ ಪ್ರಮುಖ ಬ್ಯಾಂಕ್ಗಳು ತಮ್ಮ ಫಿಕ್ಸ್ಡ್ ಡೆಪಾಸಿಟ್ (FD) ಬಡ್ಡಿದರಗಳನ್ನು ಪರಿಷ್ಕರಿಸುವ ಸಾಧ್ಯತೆಯಿದೆ. ಬಡ್ಡಿದರದ ಬದಲಾವಣೆ ಠೇವಣಿದಾರರ ಆದಾಯದ ಮೇಲೂ ಪರಿಣಾಮ ಬೀರಬಹುದು.
ದೊಡ್ಡ ಮೊತ್ತದ ಠೇವಣಿಗಳಿಗೆ ಸಂಬಂಧಿಸಿದ ಬಡ್ಡಿದರ ಮತ್ತು ನಿಯಮಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ರೂಪಿಸಲಾಗಿರುವ ನಿಯಮಗಳು ಅಕ್ಟೋಬರ್ನಿಂದ ಸಂಪೂರ್ಣವಾಗಿ ಜಾರಿಗೆ ಬರುವ ನಿರೀಕ್ಷೆಯಿದೆ.
5. ಇಂಧನ, ಎಟಿಎಂ ಶುಲ್ಕಗಳಲ್ಲೂ ಪರಿಷ್ಕರಣೆ ಸಾಧ್ಯತೆ
ಪ್ರತಿ ತಿಂಗಳ ಮೊದಲ ದಿನದಂದು ನಡೆಯುವ ದರ ಪರಿಷ್ಕರಣೆಯ ಭಾಗವಾಗಿ ಸೆಪ್ಟೆಂಬರ್ 1ರಂದು ವಿಮಾನ ಇಂಧನ (ATF), ಪೆಟ್ರೋಲ್ ಮತ್ತು ಎಲ್ಪಿಜಿ ದರಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
ಇದರೊಂದಿಗೆ ವಿವಿಧ ಬ್ಯಾಂಕ್ಗಳು ನೀಡುವ ಉಚಿತ ಎಟಿಎಂ ವಹಿವಾಟುಗಳ ಮಿತಿ ಹಾಗೂ ಮಿತಿಯನ್ನು ಮೀರಿದ ನಂತರ ವಿಧಿಸುವ ಸೇವಾ ಶುಲ್ಕಗಳಲ್ಲೂ ಬದಲಾವಣೆಗಳಾಗುವ ಸಾಧ್ಯತೆಯಿದೆ.

ಗ್ರಾಹಕರು ಗಮನಿಸಬೇಕಾದದ್ದು
ಸೆಪ್ಟೆಂಬರ್ ಆರಂಭಕ್ಕೂ ಮುನ್ನ ತೆರಿಗೆದಾರರು ತಮ್ಮ ಐಟಿಆರ್ ಸಲ್ಲಿಕೆ ಸ್ಥಿತಿಯನ್ನು ಪರಿಶೀಲಿಸುವುದು, ಎಲ್ಪಿಜಿ ಗ್ರಾಹಕರು ಇ-ಕೆವೈಸಿ ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು
ಹಾಗೂ ಬ್ಯಾಂಕ್ ಗ್ರಾಹಕರು ಎಫ್ಡಿ ಮತ್ತು ಎಟಿಎಂ ಶುಲ್ಕಗಳಲ್ಲಿನ ಬದಲಾವಣೆಗಳನ್ನು ಪರಿಶೀಲಿಸುವುದು ಸೂಕ್ತವಾಗಿದೆ.
MUST WATCH : ಪಕ್ಷಕ್ಕಾಗಿ ಎಲ್ಲದಕ್ಕೂ ಸಿದ್ದ ಎಂದ NAGENDRA – DKS ಹೇಳಿಕೆ ಕೊಡ್ತು ರಾಜೀನಾಮೆ ಸುಳಿವು




