ನೇಪಾಳದಲ್ಲಿ ಭೀಕರ ಪ್ರವಾಹ – ಸಾವಿನ ಸಂಖ್ಯೆ 626 ಕ್ಕೆ ಏರಿಕೆ, 2,482 ಮಂದಿ ನಾಪತ್ತೆ!

ನೇಪಾಳ–ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಭೀಕರ ಭೋಟೆಕೋಶಿ–ತ್ರಿಶೂಲಿ ಪ್ರಕೃತಿ ವಿಕೋಪದಿಂದ ಉಭಯ ಪ್ರದೇಶಗಳಲ್ಲಿ ಜಲಪ್ರಳಯ ಹಾಗೂ ಹಿಮಪಾತ ಉಂಟಾಗಿ ಭಾರೀ ಹಾನಿ ಸಂಭವಿಸಿದೆ. ದುರಂತದಲ್ಲಿ ಈವರೆಗೆ 626 ಮಂದಿ ಮೃತಪಟ್ಟಿದ್ದು, 2,482ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಸಾವಿನ ಸಂಖ್ಯೆ 579ಕ್ಕೆ ಏರಿಕೆ
ನೇಪಾಳವೊಂದರಲ್ಲೇ ಸಾವಿನ ಸಂಖ್ಯೆ 579ಕ್ಕೆ ಏರಿಕೆಯಾಗಿದ್ದು, 1,924 ಮಂದಿ ನಾಪತ್ತೆಯಾಗಿದ್ದಾರೆ. ಟಿಬೆಟ್ನಲ್ಲಿ ಐವರು ಮೃತಪಟ್ಟಿದ್ದು, 558 ಮಂದಿ ಕಣ್ಮರೆಯಾಗಿದ್ದಾರೆ. ಪ್ರವಾಹ ಹಾಗೂ ಹಿಮಪಾತದಿಂದ ಗ್ರಾಮೀಣ ಪ್ರದೇಶಗಳು ಮತ್ತು ಜಲವಿದ್ಯುತ್ ಯೋಜನೆಗಳ ಕೇಂದ್ರಗಳು ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆ ಎದುರಾಗಿದೆ.

ಸುರಂಗದಲ್ಲಿ 400ಕ್ಕೂ ಹೆಚ್ಚು ಸಿಬ್ಬಂದಿ
ಸ್ಥಳೀಯ ಜಲವಿದ್ಯುತ್ ಯೋಜನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ 400ಕ್ಕೂ ಹೆಚ್ಚು ಸಿಬ್ಬಂದಿ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಆಹಾರ ಮತ್ತು ನೀರಿನ ಕೊರತೆಯಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಘಟನಾ ಪ್ರದೇಶದಲ್ಲಿ ಪ್ರವಾಹದ ಜೊತೆಗೆ ಮತ್ತಷ್ಟು ಹಿಮಪಾತ ಸಂಭವಿಸುವ ಆತಂಕವೂ ಮುಂದುವರಿದಿದೆ. ಕಡಿದಾದ ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆಗಳು ಕೊಚ್ಚಿಹೋಗಿರುವುದರಿಂದ ರಕ್ಷಣಾ ಮತ್ತು ಪರಿಹಾರ ಸಾಮಗ್ರಿಗಳನ್ನು ಸ್ಥಳಕ್ಕೆ ತಲುಪಿಸುವುದು ಕಷ್ಟಕರವಾಗಿದೆ.
ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
READ THIS : ನೇಪಾಳದ ಜಲಪ್ರಳಯಕ್ಕೆ 389ಕ್ಕೂ ಹೆಚ್ಚು ಮಂದಿ ಬಲಿ! 500 ಕ್ಕೂ ಅಧಿಕ ಮಂದಿ ನಾಪತ್ತೆ!

320ಕ್ಕೂ ಹೆಚ್ಚು ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ
ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ನೇಪಾಳಕ್ಕೆ ತೆರಳಿದ್ದ 320ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಹಾಗೂ ನಾಗರಿಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಶುಕ್ರವಾರ ಮಾಹಿತಿ ನೀಡಿದ್ದು, ಆರಂಭದಲ್ಲಿ 290 ಭಾರತೀಯರು ಸಂಪರ್ಕ ಕಳೆದುಕೊಂಡಿದ್ದರು.
ಇದೀಗ ಈ ಸಂಖ್ಯೆ 320ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ವಿದೇಶಿ ಪೌರತ್ವ ಹೊಂದಿರುವ ಸುಮಾರು 100 ಭಾರತೀಯ ಮೂಲದ ವ್ಯಕ್ತಿಗಳೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತೀಯರ ರಕ್ಷಣಾ ಕಾರ್ಯಾಚರಣೆ ಚುರುಕು
ಸಂಕಷ್ಟದ ನಡುವೆಯೂ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಕಠ್ಮಂಡುವಿನಿಂದ ತಮಿಳುನಾಡಿನ 21 ಭಾರತೀಯ ಯಾತ್ರಿಕರನ್ನು ಶುಕ್ರವಾರ ದೆಹಲಿಗೆ ಸುರಕ್ಷಿತವಾಗಿ ಕರೆತರಲಾಗಿದೆ.
ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 63 ಭಾರತೀಯರನ್ನು ರಕ್ಷಿಸಲಾಗಿದೆ.
ಇನ್ನು ಟಿಬೆಟ್ ಭಾಗದಿಂದ 149 ಭಾರತೀಯರು ನೇಪಾಳ ಗಡಿ ತಲುಪಿದ್ದು, ಚೀನಾ ಭಾಗದಲ್ಲಿ ಇನ್ನುಳಿದ 400ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಸಂಪರ್ಕ ಕಳೆದುಕೊಂಡಿರುವ ಉಳಿದ ಭಾರತೀಯರನ್ನು ಪತ್ತೆಹಚ್ಚಲು ರಾಯಭಾರ ಕಚೇರಿಯು ಸ್ಥಳೀಯ ಆಡಳಿತದೊಂದಿಗೆ ಶ್ರಮಿಸುತ್ತಿದೆ.

MUST WATCH : ನೀವೆ BJP ಪಕ್ಷದ ಮುಂದಿನ ರಾಜ್ಯಾಧ್ಯಕ್ಷರಂತೆ ನಿಜಾನಾ ಸರ್.?




