
ಬಗೆದಷ್ಟೂ ಬಯಲಾಗುತ್ತಿವೆ KPSC ಕರ್ಮಕಾಂಡ: 80 ಲಕ್ಷದಿಂದ ಶುರುವಾಗುತ್ತಿದ್ದ ಡೀಲ್… ಕೊನೆಗೆ 30ರಿಂದ 40 ಲಕ್ಷಕ್ಕೆ ಫೈನಲ್..?
KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಂತೆ ಗಂಭೀರ ಆರೋಪಗಳು ಮುನ್ನೆಲೆಗೆ ಬರುತ್ತಿವೆ. ಹೌದು.. ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಪಾತ್ರದ ಬಗ್ಗೆ ಒಂದು ಕಡೆ ತನಿಖೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಕೆಲ ಸದಸ್ಯರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಜ್ಞಾನೇಂದ್ರ ಕುಮಾರ್ ವಿರುದ್ಧದ ಆರೋಪವೇನು?
ಅಷ್ಟಕ್ಕೂ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧದ ಆರೋಪ ಏನು ಅನ್ನೋದನ್ನ ನೋಡೋದಾದ್ರೆ, ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಅವರ ಸುಪರ್ದಿಯಲ್ಲಿತ್ತು. ಆದ್ರೆ ಪರೀಕ್ಷೆ ನಡೆಯುವುದಕ್ಕೂ ಮೊದಲೇ ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳು ತಲುಪಿದ್ದವು ಎಂಬುದು ಇಡಿ ಆರೋಪ.
READ THIS : KPSC ಅಕ್ರಮದ ಸ್ಫೋಟಕ ಮಾಹಿತಿ ಬಯಲು – ಮಾಜಿ ಅಧ್ಯಕ್ಷನಿಗೆ ಇ.ಡಿ ಸಮನ್ಸ್!

80 ಲಕ್ಷದಿಂದ ಶುರುವಾಗುತ್ತಿದ್ದ ಡೀಲ್!
ಇನ್ನು ಸರ್ಕಾರಿ ಪಶುವೈದ್ಯಾಧಿಕಾರಿ ಹುದ್ದೆ ಕೊಡಿಸುವುದಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಆರಂಭದಲ್ಲಿ ಸುಮಾರು 80 ಲಕ್ಷ ರೂಪಾಯಿವರೆಗೆ ಬೇಡಿಕೆ ಇಡಲಾಗುತ್ತಿತ್ತು ಎನ್ನಲಾಗಿದೆ. ಬಳಿಕ ಅಭ್ಯರ್ಥಿಗಳಿಗೆ ಅನುಗುಣವಾಗಿ 30ರಿಂದ 40 ಲಕ್ಷ ರೂಪಾಯಿಗೆ ಡೀಲ್ ಅಂತಿಮಗೊಳಿಸಲಾಗುತ್ತಿತ್ತು ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಹಣ ನೀಡಲು ಸಿದ್ಧವಿದ್ದ ಕೆಲ ಅಭ್ಯರ್ಥಿಗಳನ್ನು ಗುರುತಿಸಿ, ದೇವನಹಳ್ಳಿ ಸಮೀಪದ ವಿಲ್ಲಾಗಳಲ್ಲಿ ಇರಿಸಲಾಗಿತ್ತು. ಬಳಿಕ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನು ಅವರಿಗೆ ತಲುಪಿಸಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿದೆ.
ಒಟ್ಟು 80 ಲಕ್ಷ ರೂಪಾಯಿ ವರ್ಗಾವಣೆ
ಕೆಲವು ಅಭ್ಯರ್ಥಿಗಳಿಂದ ಖಾಲಿ ಚೆಕ್ ಹಾಗೂ ಪ್ರಾಮಿಸರಿ ನೋಟ್ಗಳನ್ನು ಪಡೆಯಲಾಗಿತ್ತು ಎನ್ನಲಾಗಿದೆ. ಅಲ್ಲದೆ 11 ಅಭ್ಯರ್ಥಿಗಳು ಕನ್ನಾಳೆಗೆ ಸಂಬಂಧಿಸಿದ ಖಾತೆಗಳಿಗೆ ಒಟ್ಟು 80 ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವುದನ್ನು ಹಿಂದಿನ ಸಿಐಡಿ ತನಿಖೆಯಲ್ಲಿ ಪತ್ತೆ ಮಾಡಲಾಗಿತ್ತು ಎಂಬ ಮಾಹಿತಿಯೂ ಇದೆ.

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಇವರ ಪಾತ್ರವಿತ್ತೇ?
ಇದರ ಮಧ್ಯೆ ಪ್ರಕರಣದ ಮತ್ತೊಂದು ಆಯಾಮದ ಮೇಲೂ ತನಿಖೆ ತೀವ್ರಗೊಂಡಿದೆ. ಮಾಜಿ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಅವರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ. ಅವರ ವಿರುದ್ಧದ ನಿರ್ದಿಷ್ಟ ಆರೋಪಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಸಂಪೂರ್ಣ ಚಿತ್ರಣ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
MUST WATCH : ರಾಜ್ಯದಲ್ಲಿರೋ ಪೊಲೀಸ್ ಸ್ಟೇಷನ್ ಎಲ್ಲಾ ಕಾಂಗ್ರೆಸ್ ಸ್ಟೇಷನ್ ಆಗಿಬಿಟ್ಟಿದೆ




