
DAVANAGERE : ವರದಕ್ಷಿಣೆ ಕಿರುಕುಳ – ಪತಿ ಕುಟುಂಬಸ್ಥರಿಂದಲೇ ಪತ್ನಿ ಕೊಲೆ ಆರೋಪ
ಆ ತಾಯಿ ತನ್ನ ಮಗಳನ್ನು ದೂರದ ಊರಿಗೆ ಮದುವೆ ಮಾಡಿಕೊಟ್ಟಿರಲಿಲ್ಲ. ತನ್ನದೇ ಸಂಬಂಧಿಕರ ಮನೆಗೆ, ಅದು ಹುಟ್ಟೂರಿನಲ್ಲೇ ಮದುವೆ ಮಾಡಿಕೊಟ್ಟಿದ್ರು. ಕಣ್ಣೆದುರೇ ಮಗಳು ಇರ್ತಾಳೆ, ಸುಖವಾಗಿ ಸಂಸಾರ ಮಾಡ್ತಾಳೆ ಅನ್ನೋ ಕನಸು ಕಂಡಿದ್ರು. ಆದ್ರೆ ಐದು ವರ್ಷಗಳ ಬಳಿಕ ಅದೇ ಮಗಳ ಮೃತದೇಹದ ಮುಂದೆ ನಿಂತು ನ್ಯಾಯಕ್ಕಾಗಿ ಕಣ್ಣೀರಿಡುವ ಪರಿಸ್ಥಿತಿ ಎದುರಾಗಿದೆ.
ಸಂಬಂಧದಲ್ಲೇ ಮದುವೆ
ಹೌದು.. ಇಂತಹ ಮನಕಲಕುವ ಘಟನೆಯೊಂದು ನಡೆದಿರೋದು ದಾವಣಗೆರೆಯಲ್ಲಿ. ಮೃತ ಮಹಿಳೆಯನ್ನು ಹರಿಹರ ತಾಲೂಕಿನ ಕಡ್ಲೆಗೊಂದಿ ಗ್ರಾಮದ ಅಕ್ಕಮ್ಮ ಹಾಗೂ ಚಂದ್ರಪ್ಪ ದಂಪತಿಯ ಪುತ್ರಿ ವಿನುತಾ ಎಂದು ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಇದೇ ಗ್ರಾಮದ ಶಿವಶಂಕರ್ ಜೊತೆ ವಿನುತಾ ಮದುವೆಯಾಗಿತ್ತು. ಶಿವಶಂಕರ್ ಕೂಡ ಅಕ್ಕಮ್ಮ ಅವರ ಸಂಬಂಧಿಯಾಗಿದ್ದು, ಮಗಳು ತಮ್ಮ ಕಣ್ಣೆದುರೇ ಸುಖವಾಗಿ ಬದುಕಲಿ ಅನ್ನೋ ಆಸೆಯಿಂದ ಸಂಬಂಧಿಕರ ಮನೆಯಲ್ಲೇ ಮದುವೆ ಮಾಡಿಕೊಟ್ಟಿದ್ರು.

READ THIS : ಪ್ಲಾಸ್ಟಿಕ್ ಚೀಲದಲ್ಲಿ ಶವ ಪತ್ತೆ! ಚಿನ್ನಾಭರಣಕ್ಕಾಗಿ ವೃದ್ಧೆ ಕೊಲೆ?
ಅತ್ತೆ–ಮಾವನಿಂದ ವರದಕ್ಷಿಣೆಗಾಗಿ ಕಿರುಕುಳ
ಆದ್ರೆ ಮದುವೆಯ ನಂತರ ವಿನುತಾಗೆ ಪತಿ ಹಾಗೂ ಅತ್ತೆ–ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ತವರು ಮನೆಯಿಂದ ಹಣ ತರುವಂತೆ ಒತ್ತಡ ಹಾಕುತ್ತಿದ್ದರು. ಮಕ್ಕಳಾಗಿಲ್ಲ ಎಂಬ ವಿಚಾರ ಮುಂದಿಟ್ಟುಕೊಂಡು ಮಾನಸಿಕವಾಗಿಯೂ ಕಿರುಕುಳ ನೀಡಲಾಗುತ್ತು ಎನ್ನಲಾಗಿದೆ.

ಪತಿ ಕುಟುಂಬಸ್ಥರಿಂದಲೇ ಕೊಲೆಯಾದ್ಲಾ ಪತ್ನಿ?
ನಿನ್ನೆ ಕಡ್ಲೆಗೊಂದಿ ಗ್ರಾಮದಲ್ಲಿ ವಿನುತಾ ಅಜ್ಜನ ಪುಣ್ಯಸ್ಮರಣೆ ಇತ್ತು. ತವರು ಮನೆಗೆ ಹೋಗಿ ಪಕ್ಕದಲ್ಲೇ ಇದ್ದ ಗಂಡನ ಮನೆಗೆ ಮರಳಿದ್ದ ವಿನುತಾಗೆ ಅದೇನಾಯ್ತೋ ಗೊತ್ತಿಲ್ಲ. ಆಕೆ ನೇಣು ಹಾಕಿಕೊಂಡಿದ್ದಾಳೆ ಎಂದು ಶಿವಶಂಕರ್ ಕುಟುಂಬಸ್ಥರು ತಿಳಿಸಿದ್ದಾರೆ. ತಕ್ಷಣ ಮಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆತಂದಾಗ ವಿನುತಾ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ವಿನುತಾ ಸಾವಿನ ಬಳಿಕ ಪತಿ ಶಿವಶಂಕರ್, ಅತ್ತೆ ಹಾಗೂ ಮಾವ ಪರಾರಿಯಾಗಿದ್ದು, ವಿನುತಾ ಸಾವಿನ ಬಗ್ಗೆ ಅನುಮಾನ ಹಲವು ಅನುಮಾನಗಳು ವ್ಯಕ್ತವಾಗ್ತಿವೆ.
ಪ್ರಕರಣ ದಾಖಲು!
ಇಂದು ಬೆಳಗ್ಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವಿನುತಾ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರು ಮಗಳ ಮೃತದೇಹವನ್ನು ದಾವಣಗೆರೆ ಎಸ್ಪಿ ಕಚೇರಿ ಬಳಿ ತಂದು ತಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ವಿನುತಾ ತಾಯಿ ಅಕ್ಕಮ್ಮ ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MUST WATCH : ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಸ್ಫೋಟ ಇಬ್ಬರು ಯುವಕರಿಗೆ ಗಂಭೀರ ಗಾಯ




