DAVANAGERE ಯಲ್ಲಿ ಹೋಟೆಲ್, ಬೇಕರಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ರೇಡ್..!

ದಾವಣಗೆರೆ ಜಿಲ್ಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಹೋಟೆಲ್, ಬೇಕರಿ ಹಾಗೂ ಬೀದಿ ಬದಿಯ ಆಹಾರ ಮಳಿಗೆಗಳ ಮೇಲೆ ದಿಢೀರ್ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹೋಟೆಲ್ಗಳಿಗೆ ನೋಟಿಸ್ ನೀಡಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ.
ನಿಯಮ ಉಲ್ಲಂಘಿಸಿದ ಹೋಟೆಲ್ಗಳಿಗೆ ನೋಟೀಸ್!
ಹೌದು.. ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದಾರೆ. ಹೋಟೆಲ್ಗಳು, ಬೇಕರಿಗಳು ಹಾಗೂ ಬೀದಿ ಬದಿಯ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ನಿಯಮಗಳನ್ನು ಉಲ್ಲಂಘಿಸಿರುವ ಹೋಟೆಲ್ಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

84 ಆಹಾರ ಮಾದರಿಗಳ ಸಂಗ್ರಹ
ಇನ್ನು ದಾಳಿಯ ವೇಳೆ ಜಿಲ್ಲೆಯ ಐದು ತಾಲೂಕುಗಳಿಂದ ಒಟ್ಟು 84 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ದಾವಣಗೆರೆ ತಾಲೂಕಿನಲ್ಲಿ 27, ಹೊನ್ನಾಳಿಯಲ್ಲಿ 19, ಚನ್ನಗಿರಿಯಲ್ಲಿ 18, ಹರಿಹರದಲ್ಲಿ 12 ಹಾಗೂ ಜಗಳೂರು ತಾಲೂಕಿನಲ್ಲಿ 8 ಆಹಾರ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಈ ಮಾದರಿಗಳ ಪರೀಕ್ಷಾ ವರದಿ ಬಂದ ಬಳಿಕ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
READ THIS: ರಾಜ್ಯಾದ್ಯಂತ ಐಸ್ಕ್ರೀಮ್ ಘಟಕಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ!

ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಬೇಕು
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ. ನಾಗರಾಜ್ ಜಿ.ಎಸ್. ಅವರ ನೇತೃತ್ವದಲ್ಲಿ ಈ ತಪಾಸಣೆ ನಡೆದಿದೆ. ಹೋಟೆಲ್ ಹಾಗೂ ಬೇಕರಿಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಬೇಕು. ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಆಹಾರ ತಯಾರಿಸುವ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
DAVANAGERE – ಕೃತಕ ಬಣ್ಣಗಳನ್ನು ಬಳಸದಂತೆ ಎಚ್ಚರಿಕೆ!
ಮತ್ತೊಂದೆಡೆ ಆಹಾರ ತಯಾರಿಕೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳನ್ನು ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೋಟೆಲ್ ಹಾಗೂ ಬೇಕರಿ ಮಾಲೀಕರಿಗೆ ತಿಳಿಸಲಾಗಿದೆ.

ಒಟ್ಟಿನಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ಹೋಟೆಲ್, ಬೇಕರಿ ಹಾಗೂ ಆಹಾರ ಮಳಿಗೆಗಳ ಮೇಲೆ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘಿಸಿದವರಿಗೆ ನೋಟಿಸ್ ನೀಡಿದ್ದಾರೆ.
ಒಟ್ಟು 84 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷಾ ವರದಿಯಲ್ಲಿ ಏನು ಹೊರಬರಲಿದೆ ಎಂಬುದನ್ನು ಕಾದುನೋಡಬೇಕಿದೆ.
MUST WATCH : ತರಕಾರಿ ಮಾರುಕಟ್ಟೆ ಆಯ್ತು ತಿಪ್ಪೆ ಗುಂಡಿ – ವ್ಯಾಪಾರಿಗಳು, ಗ್ರಾಹಕರಿಗೆ ನಿತ್ಯ ಕಿರಿಕಿರಿ





