
CHAMARAJANAGARA : ವನ್ಯಜೀವಿ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಹೊಸ ರೂಲ್ಸ್! ಇನ್ಮುಂದೆ ಮೊಬೈಲ್ ಬಳಕೆ ನಿಷೇಧ, ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ!
ವನ್ಯಜೀವಿ ಸಫಾರಿಗೆ ಹೋಗುವ ಪ್ರವಾಸಿಗರೇ ಇನ್ಮುಂದೆ ಸಫಾರಿ ವೇಳೆ ಮೊಬೈಲ್ ಫೋನ್ ಬಳಸುವಂತಿಲ್ಲ. ಹೌದು.. ಚಾಮರಾಜನಗರ ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶಗಳ ಕೋರ್ ಭಾಗದ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದ್ದು, ಪ್ರವಾಸಿಗರ ಜೊತೆಗೆ ಸಫಾರಿ ವಾಹನ ಚಾಲಕರು ಹಾಗೂ ಮಾರ್ಗದರ್ಶಕರಿಗೂ ನಿಯಮ ಅನ್ವಯವಾಗಲಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೊಸ ನಿಯಮ
ಸುಪ್ರೀಂ ಕೋರ್ಟ್ 2025ರ ನವೆಂಬರ್ 17ರಂದು ನೀಡಿರುವ ಆದೇಶದ ಪ್ಯಾರಾ 48.5ರ ಅನ್ವಯ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ವನ್ಯಜೀವಿಗಳ ಸಂರಕ್ಷಣೆ ಹಾಗೂ ಸಫಾರಿ ವೇಳೆ ನಿಯಮಬದ್ಧ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತಿದೆ.

ಸಫಾರಿ ವಾಹನಗಳಲ್ಲಿ ಏರ್ಪ್ಲೇನ್ ಮೋಡ್ ಸೂಚನೆ
ಇನ್ನು ಸಫಾರಿಗೆ ತೆರಳುವ ಪ್ರವಾಸಿಗರು ತಮ್ಮ ಮೊಬೈಲ್ ಫೋನ್ಗಳನ್ನು ನಿಗದಿತ ಸ್ಥಳಗಳಲ್ಲಿ ಸುರಕ್ಷಿತವಾಗಿ ಇಡಬೇಕಿದೆ. ಸಫಾರಿ ವಾಹನಗಳಲ್ಲಿ ಮೊಬೈಲ್ಗಳನ್ನು ಏರ್ಪ್ಲೇನ್ ಮೋಡ್ನಲ್ಲಿ ಇರಿಸುವ ಸಂಬಂಧವೂ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಸಫಾರಿಗೆ ತೆರಳುವ ಮುನ್ನ ಪ್ರವಾಸಿಗರು ಅಲ್ಲಿನ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸಬೇಕಿದೆ.
ಪ್ರವಾಸಿಗರಿಗೆ ಹೊಸ ನಿಯಮಗಳ ಬಗ್ಗೆ ಮಾಹಿತಿ
ಇನ್ನು ಮೊಬೈಲ್ ಬಳಕೆ ನಿಷೇಧದ ಬಗ್ಗೆ ಪ್ರವಾಸಿಗರಿಗೆ ಗೊಂದಲ ಉಂಟಾಗದಂತೆ ಸಫಾರಿ ಆರಂಭವಾಗುವ ಸ್ಥಳಗಳಲ್ಲಿ ಹಾಗೂ ಎಲ್ಲ ಸಫಾರಿ ವಾಹನಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ನಿರ್ದೇಶನ ನೀಡಲಾಗಿದೆ.
ಟಿಕೆಟ್ ಬುಕಿಂಗ್ ಸಂದರ್ಭದಲ್ಲಿಯೂ ಹೊಸ ನಿಯಮಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಲು ಅರಣ್ಯ ಇಲಾಖೆ ಸೂಚಿಸಿದೆ.
READ THIS : ನೀರಾನೆ ಅಟ್ಯಾಕ್ಗೆ ಬೆಂಗಳೂರಿನ ಪಶುವೈದ್ಯೆ ದುರಂತ ಅಂತ್ಯ

ಎಲ್ಲ ಸಫಾರಿ ವಾಹನಗಳಲ್ಲಿ ವೈರ್ಲೆಸ್ ಸಂಪರ್ಕ ಕಡ್ಡಾಯ
ಮತ್ತೊಂದೆಡೆ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಸಿಬ್ಬಂದಿಯ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ಎಲ್ಲ ಸಫಾರಿ ವಾಹನಗಳಲ್ಲಿ ವೈರ್ಲೆಸ್ ಸಂಪರ್ಕ ವ್ಯವಸ್ಥೆ ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಲು ಈ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕಿದೆ.
ಮೊಬೈಲ್ ನಿಷೇಧ – ನಿಯಮಾನುಸಾರ ಕ್ಯಾಮೆರಾಗಳಿಗೆ ಅವಕಾಶ
ಇನ್ನು ಸಫಾರಿ ವೇಳೆ ಮೊಬೈಲ್ ಫೋನ್ ಬಳಸಲು ಅವಕಾಶ ಇಲ್ಲದಿದ್ದರೂ, ನಿಯಮಾನುಸಾರ ಕ್ಯಾಮೆರಾಗಳನ್ನು ಬಳಸಲು ಅವಕಾಶ ನೀಡಲಾಗಿದೆ.
ಹೀಗಾಗಿ ವನ್ಯಜೀವಿಗಳ ಫೋಟೋ ತೆಗೆಯಲು ಬಯಸುವ ಪ್ರವಾಸಿಗರು ಅನುಮತಿಸಲಾದ ಕ್ಯಾಮೆರಾಗಳನ್ನು ಬಳಸಬಹುದಾಗಿದೆ.
ಆದರೆ ಫೋಟೋಗ್ರಫಿ ವಿಚಾರದಲ್ಲೂ ಅರಣ್ಯ ಇಲಾಖೆಯ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

MUST WATCH : ಕಾಂಗ್ರೆಸ್ ನಾಯಕತ್ವ ಸತ್ತೋಗಿದೆ – ಕೈ ನಾಯಕರಿಗೆ ಛಲವಾದಿ ಖಡಕ್ ಟಾಂಗ್




