
Mandya ದಲ್ಲಿ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಮೂಟೆಗಟ್ಟಲೆ ನೋಟು, ರಾಶಿಗಟ್ಟಲೆ ಚಿಲ್ಲರೆ ನಾಣ್ಯ ಪತ್ತೆ!
ಇತ್ತೀಚೆಗಷ್ಟೇ ಮಂಡ್ಯ ನಗರದಲ್ಲಿ ಮೃತಪಟ್ಟ ವೃದ್ಧೆಯೊಬ್ಬರ ಮನೆಯಲ್ಲಿ ಸುಮಾರು ಎಂಟು ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿತ್ತು. ಇದೀಗ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಮತ್ತೊಬ್ಬ ವೃದ್ಧೆಯ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಬರೋಬ್ಬರಿ ಹತ್ತು ವರ್ಷಗಳಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಹಣವನ್ನು ಚೀಲಗಳಲ್ಲಿ ತುಂಬಿಸಿಟ್ಟುಕೊಂಡಿದ್ದ ಸಾವಿತ್ರಿ ಎಂಬ ವೃದ್ಧೆಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿದೆ.

ಹಲವು ವರ್ಷಗಳಿಂದ ವೃದ್ದೆ ಒಂಟಿಯಾಗಿ ವಾಸ
ಶ್ರೀರಂಗಪಟ್ಟಣದ ಪೂರ್ಣಯ್ಯ ಬೀದಿಯಲ್ಲಿ ಸಾವಿತ್ರಿ ಎಂಬ ವೃದ್ಧೆ ಹಲವು ವರ್ಷಗಳಿಂದ ಒಂಟಿಯಾಗಿ ವಾಸವಾಗಿದ್ರು. ಮನೆಯಲ್ಲಿ ಸ್ವಚ್ಛತೆ ಇಲ್ಲದೆ, ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲದೆ ಜೀವನ ಸಾಗಿಸುತ್ತಿದ್ದರು. ಪ್ರತಿನಿತ್ಯ ಭಿಕ್ಷೆ ಬೇಡಿ ಬಂದ ಹಣವನ್ನು ಖರ್ಚು ಮಾಡದೇ ಚೀಲಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ರಂತೆ. ಇನ್ನು ವೃದ್ದೆ ಸಾವಿತ್ರಿ ಮನೆಯಿಂದ ಹೊರಗೆ ಬಾರದಿದ್ದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಮನೆಗೆ ತೆರಳಿ ನೋಡಿದಾಗ, ಅವರು ಅನಾರೋಗ್ಯದಿಂದ ನರಳುತ್ತಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರು ಆಕೆಗೆ ಊಟ ನೀಡಿ ಉಪಚರಿಸಿ, ವೈದ್ಯಕೀಯ ನೆರವು ಕಲ್ಪಿಸಿದ್ದಾರೆ.
READ THIS : ಬ್ರಿಮ್ಸ್ ಆಸ್ಪತ್ರೆಯಲ್ಲಿ ಕಂತೆ ಕಂತೆ ಹಣ ಪತ್ತೆ!

ಮೂಟೆಗಟ್ಟಲೆ ನೋಟು, ರಾಶಿಗಟ್ಟಲೆ ಚಿಲ್ಲರೆ ನಾಣ್ಯ
ಬಳಿಕ ಮನೆಯ ಪರಿಸ್ಥಿತಿ ಕಂಡು ಸ್ವಚ್ಛತಾ ಕಾರ್ಯವನ್ನೂ ಕೈಗೊಂಡಿದ್ದಾರೆ. ಈ ವೇಳೆ ಮನೆಯನ್ನು ಪರಿಶೀಲಿಸಿದಾಗ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಹಣದ ಮೂಟೆಗಳು ಪತ್ತೆಯಾಗಿವೆ.
ತಕ್ಷಣವೇ ಸ್ಥಳೀಯ ಸ್ವಯಂಸೇವಕರ ಸಹಾಯದಿಂದ ಹಣ ಎಣಿಕೆ ಕಾರ್ಯ ಆರಂಭಿಸಲಾಗಿದೆ. ಬರೋಬ್ಬರಿ 20ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರು ಸೇರಿಕೊಂಡು ಚಿಲ್ಲರೆ ಹಾಗೂ ನೋಟುಗಳನ್ನು ಪ್ರತ್ಯೇಕಿಸಿ ಹಣ ಎಣಿಕೆ ಮಾಡಿದ್ದಾರೆ. ಸದ್ಯ ಲಕ್ಷಾಂತರ ರೂಪಾಯಿ ಸಂಗ್ರಹವಾಗಿರುವುದು ಬೆಳಕಿಗೆ ಬಂದಿದೆ.

ಹಣವನ್ನು ಸಾವಿತ್ರಿ ಅವರ ಹೆಸರಿಗೆ ಡೆಪಾಸಿಟ್
ಇನ್ನು ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಈ ಹಣವನ್ನು ಸಾವಿತ್ರಿ ಅವರ ಹೆಸರಿಗೆ ಡೆಪಾಸಿಟ್ ಮಾಡುವ ನಿರ್ಧಾರವನ್ನು ಸ್ಥಳೀಯರು ಕೈಗೊಂಡಿದ್ದಾರೆ.
ಅನಾರೋಗ್ಯದಿಂದ ನರಳುತ್ತಿದ್ದ ವೃದ್ಧೆಗೆ ಸ್ನಾನ ಮಾಡಿಸಿ, ಊಟ ನೀಡಿ, ವೈದ್ಯೋಪಚಾರ ಮಾಡಿಸುವುದರ ಜೊತೆಗೆ, ಅನೈರ್ಮಲ್ಯದಿಂದ ಕೂಡಿದ್ದ ಮನೆಯನ್ನು ಸ್ವಚ್ಛಗೊಳಿಸುವ ಮೂಲಕ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.
MUST WATCH : ನಿಯಂತ್ರಣ ತಪ್ಪಿ ಹಾಲಿನ ಗಾಡಿ ಪಲ್ಟಿ – ಹಾಲು ತುಂಬಿಕೊಳ್ಳಲು ಮುಗಿಬಿದ್ದ ಜನ




