
Mandya ಕಾರಾಗೃಹದಲ್ಲಿ ಕೈದಿಗೆ ರಾಜಾತಿಥ್ಯ: ಜೈಲು ಅಧೀಕ್ಷಕಿ ಶಾಂತಮ್ಮ ಎತ್ತಂಗಡಿ
ವಿಚಾರಣಾಧೀನ ಕೈದಿಗೆ ರಾಜಾತಿಥ್ಯ ನೀಡಿದ ಆರೋಪ ಹಾಗೂ ಜೈಲಿನ ಕೊಠಡಿಗಳಿಗೆ ಹಣ ನಿಗದಿಪಡಿಸಿದ ಆರೋಪ ಕೇಳಿಬಂದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ. ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಗೆಳತಿಯೊಂದಿಗೆ ಆರೋಪಿ
ಭೂ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಡಿಎಲ್ಆರ್ (ADLR) ಅಧಿಕಾರಿ ಮಹಮದ್ ಹುಸೇನ್ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದರು. ಗಂಭೀರ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಬೆನ್ನು ನೋವಿನ ಕಾರಣ ನೀಡಿ ಅವರನ್ನು ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹುಸೇನ್ ತನ್ನ ಗೆಳತಿಯೊಂದಿಗೆ ಸಮಯ ಕಳೆಯುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು ಎಂಬ ಆರೋಪ ಕೇಳಿಬಂದಿತ್ತು.
READ THIS : ಮಂಡ್ಯ ಜೈಲಿನಲ್ಲೂ ರಾಜಾತಿಥ್ಯ – ಕೈದಿಗಳ ಸೆಲ್ಗೂ ರೇಟು!

ನ್ಯಾಯಾಧೀಶರ ದಿಢೀರ್ ಭೇಟಿ; ಪ್ರಕರಣ ಬಯಲು
ಕೈದಿಯನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ನ್ಯಾಯಾಲಯಕ್ಕೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ್ ಅವರು ಮಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಆಸ್ಪತ್ರೆಯಲ್ಲಿ ಕೈದಿಗೆ ನೀಡಲಾಗಿದ್ದ ಸೌಲಭ್ಯಗಳ ಕುರಿತು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿ, ವಿಚಾರಣಾಧೀನ ಕೈದಿಯ ವಿಚಾರದಲ್ಲಿ ನಿಯಮಗಳನ್ನು ಪಾಲಿಸದ ಆರೋಪದ ಹಿನ್ನೆಲೆಯಲ್ಲಿ ಜೈಲು ಅಧೀಕ್ಷಕಿ ಶಾಂತಮ್ಮ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಜೈಲಿನ ಸೆಲ್ಗಳಿಗೆ ‘ರೇಟ್ ಫಿಕ್ಸ್’ ಆರೋಪ
ಇದರ ಬೆನ್ನಲ್ಲೇ ಮಂಡ್ಯ ಜಿಲ್ಲಾ ಕಾರಾಗೃಹದೊಳಗಿನ ಸೆಲ್ಗಳು ಹಾಗೂ ಕೊಠಡಿಗಳಿಗೆ ಹಣ ನಿಗದಿಪಡಿಸಿ ಕೈದಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬಂದಿದ್ದವು.
ಜೈಲಿನಲ್ಲಿನ ಅಕ್ರಮ ಚಟುವಟಿಕೆಗಳ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾದ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಈ ಬಗ್ಗೆ ಗಮನ ಹರಿಸಿದೆ.
ಮಾಧ್ಯಮ ವರದಿಗಳು ಹಾಗೂ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಶಾಂತಮ್ಮ ಅವರನ್ನು ಮಂಡ್ಯದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ.
MUST WATCH : ಹಾಡಹಗಲೇ ಮಚ್ಚು ಹಿಡಿದು ಹುಚ್ಚಾಟ – ತುಮಕೂರಲ್ಲಿ ಭಾರೀ ಹೈಡ್ರಾಮಾ.!




