
ಕೈದಿಗಳ ವಿಶೇಷ ಆತಿಥ್ಯಕ್ಕೆ ರೇಟ್ ಫಿಕ್ಸ್: Mandya ಜೈಲಾಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ
ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗೆ ರಾಜಾತಿಥ್ಯ ನೀಡಿದ ಪ್ರಕರಣ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಜೈಲಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಕೈದಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲು ‘ರೇಟ್ ಫಿಕ್ಸ್’ ಮಾಡಲಾಗಿದೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೈಲು ಅಧೀಕ್ಷಕಿ ಶಾಂತಮ್ಮ ಹಾಗೂ ಸಿಬ್ಬಂದಿ ವಿರುದ್ಧ ಹಣ ವಸೂಲಿ ಆರೋಪ ಮಾಡಲಾಗಿದೆ.
ಒಂದೊಂದು ಸೆಲ್ಗೆ ಒಂದೊಂದು ದರ?
ವೈರಲ್ ಆಗಿರುವ ಪತ್ರದಲ್ಲಿ ವಿವಿಧ ಸೆಲ್ಗಳ ಕೈದಿಗಳಿಂದ ಪ್ರತಿ ತಿಂಗಳು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅದರಂತೆ,
- ಸೆಲ್-1ರಿಂದ ತಿಂಗಳಿಗೆ ₹10 ಸಾವಿರ
- ಸೆಲ್-3ರಿಂದ ತಿಂಗಳಿಗೆ ₹15 ಸಾವಿರ
- ಸೆಲ್-4ರಿಂದ ತಿಂಗಳಿಗೆ ₹15 ಸಾವಿರ
- ಸೆಲ್-5ರಿಂದ ತಿಂಗಳಿಗೆ ₹5 ಸಾವಿರ
- ಸೆಲ್-6ರಿಂದ ತಿಂಗಳಿಗೆ ₹8 ಸಾವಿರ
ವಸೂಲಿ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಜೈಲಿನ ಕೊಠಡಿ ಬದಲಾಯಿಸಲು ₹2 ಸಾವಿರ ಹಾಗೂ ಪನಿಷ್ಮೆಂಟ್ ಸೆಲ್ನಿಂದ ಹೊರಬರಲು ₹10 ಸಾವಿರ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
READ THIS : ಮಂಡ್ಯ ಜೈಲಲ್ಲೂ ವಿಚಾರಣಾಧೀನ ಖೈದಿಗೆ ಹೈಫೈ ಟ್ರೀಟ್ ಮೆಂಟ್!

ಹಣ ನೀಡಿದರೆ ‘ಕ್ಯಾಟರಿಂಗ್’ ವ್ಯವಸ್ಥೆ?
ವೈರಲ್ ಪತ್ರದ ಪ್ರಕಾರ, ಹಣ ಪಾವತಿಸಿದ ಕೈದಿಗಳಿಗೆ ಜೈಲಿನೊಳಗೆ ವಿಶೇಷ ಆಹಾರ ಒದಗಿಸುವ ವ್ಯವಸ್ಥೆಯೂ ಇದೆ ಎನ್ನಲಾಗಿದೆ. ಒಂದು ಕೆ.ಜಿ. ಮಟನ್ಗೆ ₹1,250 ಹಾಗೂ ಚಿಕನ್ಗೆ ₹700 ದರ ನಿಗದಿಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೈದಿಗಳ ಬೇಡಿಕೆಗೆ ಅನುಗುಣವಾಗಿ ಹಣ ಪಡೆದು ಆಹಾರ ತಯಾರಿಸಿಕೊಡಲಾಗುತ್ತದೆ ಮತ್ತು ಹಣ ನೀಡದಿದ್ದರೆ ಬೆದರಿಕೆ ಹಾಕಲಾಗುತ್ತದೆ ಎಂಬ ಆರೋಪವೂ ಪತ್ರದಲ್ಲಿದೆ.
ಈ ಆರೋಪಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಮನವಿ ಮಾಡಲಾಗಿದೆ.
Mandya – ‘ರಾಜಾತಿಥ್ಯ’ ಪ್ರಕರಣದ ಬೆನ್ನಲ್ಲೇ ಮತ್ತೊಂದು ಆರೋಪ
ಇತ್ತೀಚೆಗೆ Mandya ಜೈಲಿನಲ್ಲಿ ಇರಬೇಕಿದ್ದ ಭೂ ದಾಖಲೆಗಳ ಪ್ರಕರಣದ ಪ್ರಮುಖ ಆರೋಪಿಯೊಬ್ಬರನ್ನು ಅನಧಿಕೃತವಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿರುವುದು ಜಿಲ್ಲಾ ನ್ಯಾಯಾಧೀಶರ ದಿಢೀರ್ ತಪಾಸಣೆ ವೇಳೆ ಬೆಳಕಿಗೆ ಬಂದಿತ್ತು. ಅನಾರೋಗ್ಯವಿಲ್ಲದಿದ್ದರೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು ಹಾಗೂ ಆತನೊಂದಿಗೆ ಯುವತಿಯೊಬ್ಬಳು ವಿಶೇಷ ಕೊಠಡಿಯಲ್ಲಿ ಇರುವುದು ಪತ್ತೆಯಾಗಿತ್ತು.

ಮತ್ತೊಂದು ಆರೋಪ – ತೇವ್ರ ಚರ್ಚೆಗೆ ಗ್ರಾಸ
ಈ ಪ್ರಕರಣದ ಬೆನ್ನಲ್ಲೇ ಜೈಲು ಅಧಿಕಾರಿಗಳ ವಿರುದ್ಧ ಇದೀಗ ಹಣ ವಸೂಲಿ ಹಾಗೂ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡುವ ಆರೋಪ ಕೇಳಿಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪತ್ರದಲ್ಲಿನ ಆರೋಪಗಳು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
MUST WATCH : ಕಸ ಗುಡಿಸೋ ಕೈಯಲ್ಲಿ ದುಬಾರಿ FORTUNER – ಪೌರಕಾರ್ಮಿಕನ ಖದರ್ಗೆ ಎಲ್ಲರೂ ಶಾಕ್.!




