
ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ Vaibhav Sooryavanshi ಅಬ್ಬರಿಸಿದ್ದಾರೆ.
ಭಾರತೀಯ ಕ್ರಿಕೆಟ್ನ ಯುವ ತಾರೆ ವೈಭವ್ ಸೂರ್ಯವಂಶಿ ಅಬ್ಬರ ಐಪಿಎಲ್ ಹಾಗೂ ಟೀಮ್ ಇಂಡಿಯಾ ಬಳಿಕ ಇದೀಗ ದುಲೀಪ್ ಟ್ರೋಫಿಯಲ್ಲೂ ಮುಂದುವರೆದಿದೆ. ಕೇವಲ 15ನೇ ವಯಸ್ಸಿನಲ್ಲಿ ಬಿರುಸಿನ ಅರ್ಧಶತಕ ಸಿಡಿಸಿದ ವೈಭವ್, ದುಲೀಪ್ ಟ್ರೋಫಿ ಇತಿಹಾಸದಲ್ಲೇ ಅರ್ಧಶತಕ ದಾಖಲಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
266 ರನ್ಗಳಿಗೆ ಆಲೌಟ್!
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ಹಾಗೂ ಸೆಂಟ್ರಲ್ ಝೋನ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸೆಂಟ್ರಲ್ ಝೋನ್ ತಂಡವು 266 ರನ್ಗಳಿಗೆ ಆಲೌಟ್ ಆಗಿತ್ತು.

ಕೇವಲ 42 ಎಸೆತಗಳಲ್ಲಿ ಅರ್ಧಶತಕ
ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಈಸ್ಟ್ ಝೋನ್ ಪರ ವೈಭವ್ ಸೂರ್ಯವಂಶಿ ಹಾಗೂ ಅಭಿಮನ್ಯು ಈಶ್ವರನ್ ಆರಂಭಿಕರಾಗಿ ಕಣಕ್ಕಿಳಿದರು.
ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್, ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಎದುರಾಳಿ ಬೌಲರ್ಗಳ ಬೆವರಿಳಿಸಿದರು.
READ THIS : ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ

81 ಎಸೆತಗಳಲ್ಲಿ 92 ರನ್ಗಳ ಅಬ್ಬರ
ಅರ್ಧಶತಕದ ಬಳಿಕವೂ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರಿಸಿದ ಯುವ ಎಡಗೈ ದಾಂಡಿಗ ವೈಭವ್ ಸೂರ್ಯವಂಶಿ, ಕೇವಲ 81 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 92 ರನ್ ಸಿಡಿಸಿದರು. ಶತಕದತ್ತ ಮುನ್ನುಗ್ಗುತ್ತಿದ್ದ ವೈಭವ್, ಸೆಂಚುರಿಗೆ ಕೇವಲ 8 ರನ್ಗಳ ಅಂತರದಲ್ಲಿದ್ದಾಗ ವಿಕೆಟ್ ಒಪ್ಪಿಸಿದರು. ಹೀಗಾಗಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ದಾಖಲಿಸುವ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ ಕೈಚೆಲ್ಲಿದರು.
ಆದರೆ, ಶತಕ ತಪ್ಪಿದರೂ ವೈಭವ್ ಐತಿಹಾಸಿಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಇದೀಗ ಅವರ ಪಾಲಾಗಿದೆ.

57 ವರ್ಷಗಳ ಹಳೆಯ ದಾಖಲೆ ಧೂಳೀಪಟ!
ಇದಕ್ಕೂ ಮುನ್ನ ದುಲೀಪ್ ಟ್ರೋಫಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಲಕ್ಷ್ಮಣ್ ಸಿಂಗ್ ಅವರ ಹೆಸರಿನಲ್ಲಿತ್ತು.
ಅವರು 1969ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ 15ನೇ ವಯಸ್ಸಿನಲ್ಲೇ ಅರ್ಧಶತಕ ಸಿಡಿಸಿದ ವೈಭವ್ ಸೂರ್ಯವಂಶಿ, ಲಕ್ಷ್ಮಣ್ ಸಿಂಗ್ ಅವರ 57 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
MUST WATCH : ಹಾಡಹಗಲೇ ಮಚ್ಚು ಹಿಡಿದು ಹುಚ್ಚಾಟ – ತುಮಕೂರಲ್ಲಿ ಭಾರೀ ಹೈಡ್ರಾಮಾ.!




