
CYCLONE : ಅರ್ನಾಬ್ ಚಂಡಮಾರುತ ಅಬ್ಬರ – ಆಂಧ್ರ ಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ ಎಚ್ಚರಿಕೆ : 125-135 kmph ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಅರ್ನಾಬ್ ಚಂಡಮಾರುತ ಆಂಧ್ರಪ್ರದೇಶ ಹಾಗೂ ಒಡಿಶಾದಲ್ಲಿ ಆತಂಕ ಸೃಷ್ಟಿಸಿದೆ. ಇಂದು ಮುಂಜಾನೆಯಿಂದ ಆಂಧ್ರ ಕರಾವಳಿಯಲ್ಲಿ ಚಂಡಮಾರುತದ ಪರಿಣಾಮ ತೀವ್ರಗೊಂಡಿದ್ದು, ಭಾರಿ ಗಾಳಿ ಹಾಗೂ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಅತ್ಯಂತ ತೀವ್ರ ಚಂಡಮಾರುತ ಎಂದು ವರ್ಗೀಕರಿಸಿರುವ ಅರ್ನಾಬ್ನಿಂದ ಗಂಟೆಗೆ 140 ಕಿಲೋಮೀಟರ್ವರೆಗೂ ಬಿರುಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಆತಂಕ..!
ಇಂದು ಬೆಳಗ್ಗೆ ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಅರ್ನಾಬ್ ಚಂಡಮಾರುತ ಆಂಧ್ರಪ್ರದೇಶದ ನರಸಾಪುರದಿಂದ ಸುಮಾರು 30 ಕಿಲೋಮೀಟರ್ ಪೂರ್ವಕ್ಕೆ ಹಾಗೂ ಯಾನಂನಿಂದ 45 ಕಿಲೋಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿತ್ತು.
ಕಾಕಿನಾಡದಿಂದ ಸುಮಾರು 70 ಕಿಲೋಮೀಟರ್ ಹಾಗೂ ಮಚಿಲಿಪಟ್ಟಣದಿಂದ 90 ಕಿಲೋಮೀಟರ್ ದೂರದಲ್ಲಿದ್ದ ಚಂಡಮಾರುತ, ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯನ್ನು ದಾಟುವ ಪ್ರಕ್ರಿಯೆಯಲ್ಲಿತ್ತು. ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಅಲೆಗಳ ಎತ್ತರ ಹೆಚ್ಚಾಗುವ ಸಾಧ್ಯತೆಯಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಆತಂಕ ಎದುರಾಗಿದೆ.

1.80 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ..!
ಅರ್ನಾಬ್ ಚಂಡಮಾರುತ ಪರಿಣಾಮ ಆಂಧ್ರಪ್ರದೇಶ ಹಾಗೂ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಭಾರಿ ಮಳೆ ಹಾಗೂ ಬಿರುಗಾಳಿಯ ಅಪಾಯವಿರುವ ಪ್ರದೇಶಗಳಿಂದ ಒಂದು ಲಕ್ಷ ಎಂಬತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇನ್ನು ಕರಾವಳಿ ಭಾಗಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು ಹವಾಮಾನ ಇಲಾಖೆಯ ಎಚ್ಚರಿಕೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
READ THIS : ಚಂಡಮಾರುತ ಎಫೆಕ್ಟ್ – ಮುಂದಿನ 4 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ

ಕಾಕಿನಾಡ, ಕಾಳಿಂಗಪಟ್ಟಣದಲ್ಲೂ ಭಾರಿ ಮಳೆ..!
ಇನ್ನು ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ನೆನ್ನೆ ಬೆಳಗ್ಗೆಯಿಂದ ಬುಧವಾರ ಮುಂಜಾನೆವರೆಗಿನ ಅವಧಿಯಲ್ಲಿ ವಿಶಾಖಪಟ್ಟಣದಲ್ಲಿ 216 ಮಿಲಿಮೀಟರ್ ಮಳೆ ದಾಖಲಾಗಿದೆ.
ಕಾಳಿಂಗಪಟ್ಟಣದಲ್ಲಿ 147 ಮಿಲಿಮೀಟರ್, ಕಾಕಿನಾಡದಲ್ಲಿ 118 ಮಿಲಿಮೀಟರ್ ಹಾಗೂ ಮಚಿಲಿಪಟ್ಟಣದಲ್ಲಿ 115 ಮಿಲಿಮೀಟರ್ ಮಳೆಯಾಗಿದೆ. ಭಾರಿ ಮಳೆಯಿಂದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಂಡಮಾರುತಕ್ಕೆ ವಿಮಾನ, ರೈಲು ಸಂಚಾರ ಅಸ್ತವ್ಯಸ್ತ..!
ಚಂಡಮಾರುತದ ಪರಿಣಾಮ ಆಂಧ್ರಪ್ರದೇಶ ಹಾಗೂ ಒಡಿಶಾದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಿಶಾಖಪಟ್ಟಣ ಹಾಗೂ ವಿಜಯವಾಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿಮಾನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಕೆಲವು ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ರೈಲು ಸಂಚಾರದ ಮೇಲೂ ಪರಿಣಾಮ ಬೀರಿದೆ.

ಭಾರಿ ಗಾಳಿಯಿಂದ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.
ಇನ್ನು ಈ ಚಂಡಮಾರುತಕ್ಕೆ ಅರ್ನಾಬ್ ಎಂಬ ಹೆಸರನ್ನು ಬಾಂಗ್ಲಾದೇಶ ಸೂಚಿಸಿದೆ. ಬಂಗಾಳಿ ಭಾಷೆಯಲ್ಲಿ ಅರ್ನಾಬ್ ಎಂದರೆ ಸಾಗರ ಅಥವಾ ಸಮುದ್ರ ಎಂಬ ಅರ್ಥವಿದೆ.
MUST WATCH : ಬೆಳ್ಳಂಬೆಳಗ್ಗೆ ಸಚಿವರ ಸಿಟಿ ರೌಂಡ್ಸ್ …ಪೌರಕಾರ್ಮಿಕರೊಂದಿಗೆ ಟೀ ಸವಿದ ಸಚಿವರು..!




