
BENGALURU : 824 ಕಿ.ಮೀ. ರಸ್ತೆಯಲ್ಲಿ 5,964 ಗುಂಡಿಗಳು! ‘ಇದೇನಾ ನಿಮ್ಮ ಮಾದರಿ ರಾಜಧಾನಿ?’ ಎಂದ ಆರ್. ಅಶೋಕ್
ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಇದೀಗ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಬ್ಯಾಟರಾಯನಪುರ ವಿಭಾಗದಲ್ಲಿ AI ಆಧಾರಿತವಾಗಿ ನಡೆಸಿದ ರಸ್ತೆ ಸಮೀಕ್ಷೆಯಲ್ಲಿ ಸಾವಿರಾರು ರಸ್ತೆ ಗುಂಡಿಗಳು ಪತ್ತೆಯಾಗಿದ್ದು, ಇದೇ ಅಂಕಿಅಂಶ ಮುಂದಿಟ್ಟುಕೊಂಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
5 ಸಾವಿರದ 964 ರಸ್ತೆ ಗುಂಡಿಗಳು ಪತ್ತೆ
AIR-Ai ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬ್ಯಾಟರಾಯನಪುರ ವ್ಯಾಪ್ತಿಯ 14 ವಾರ್ಡ್ಗಳಲ್ಲಿ ಸುಮಾರು 823.5 ಕಿಲೋಮೀಟರ್ ರಸ್ತೆಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ 5 ಸಾವಿರದ 964 ರಸ್ತೆ ಗುಂಡಿಗಳು ಪತ್ತೆಯಾಗಿದ್ದು, ಪ್ರತಿ ಕಿಲೋಮೀಟರ್ಗೆ ಸರಾಸರಿ 7.2 ಗುಂಡಿಗಳು ದಾಖಲಾಗಿವೆ.

ಇದೇನಾ ನಿಮ್ಮ ಮಾದರಿ ರಾಜಧಾನಿ
ಇದೇ ಅಂಕಿಅಂಶ ಮುಂದಿಟ್ಟುಕೊಂಡು ಆರ್. ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮ್ಮದೇ ಬ್ಯಾಟರಾಯನಪುರ ವಿಭಾಗದಲ್ಲಿ 824 ಕಿಲೋಮೀಟರ್ ರಸ್ತೆಗಳನ್ನು AI ಮೂಲಕ ಸಮೀಕ್ಷೆ ಮಾಡಿದಾಗ 5,964 ರಸ್ತೆ ಗುಂಡಿಗಳು ಪತ್ತೆಯಾಗಿವೆ. ಇದೇನಾ ನಿಮ್ಮ ಮಾದರಿ ರಾಜಧಾನಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿ ರೂಪಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಮತ್ತೊಂದೆಡೆ ನಗರದ ಹಲವು ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆ ಮುಂದುವರಿದಿದೆ ಎಂದು ಅವರು ಟೀಕಿಸಿದ್ದಾರೆ.
READ THIS : ಸಿಎಂ ಅಂಗಳ ತಲುಪಿದ ಕೋಲಾರ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರ ಕಿತ್ತಾಟ!
ಇಷ್ಟೊಂದು ನಿರ್ಲಕ್ಷ್ಯ ಏಕೆ?
ಪಾರ್ಕಿಂಗ್ ಶುಲ್ಕ ವಿಧಿಸುವುದರಲ್ಲಿ ಆಸಕ್ತಿ, ಒತ್ತುವರಿ ತೆರವುಗೊಳಿಸಿದ್ದೇವೆ ಎಂಬ ಪ್ರಚಾರ, ಆದರೆ ಜನರು ಪ್ರತಿನಿತ್ಯ ಬಳಸುವ ರಸ್ತೆಗಳನ್ನು ಸುರಕ್ಷಿತವಾಗಿಡುವಲ್ಲಿ ಇಷ್ಟೊಂದು ನಿರ್ಲಕ್ಷ್ಯ ಏಕೆ? ಪ್ರತಿದಿನ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು, ಕಾರ್ಮಿಕರು, ವಿದ್ಯಾರ್ಥಿಗಳು ಈ ಗುಂಡಿಗಳ ನಡುವೆ ಸಂಚರಿಸಬೇಕಾಗಿದೆ. ಮಳೆ ಬಂದರೆ ಗುಂಡಿ ಎಲ್ಲಿದೆ, ರಸ್ತೆ ಎಲ್ಲಿದೆ ಎಂಬುದೇ ತಿಳಿಯದ ಪರಿಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.
ನಿಮ್ಮದೇ ಕ್ಷೇತ್ರದಲ್ಲಿ ಸುಮಾರು 6 ಸಾವಿರ ಗುಂಡಿಗಳಿವೆ
ನಿಮ್ಮದೇ ಕ್ಷೇತ್ರದಲ್ಲಿ ಸುಮಾರು 6 ಸಾವಿರ ಗುಂಡಿಗಳಿವೆ. ಇನ್ನು ಬೆಂಗಳೂರಿನ ನಗರದ ರಸ್ತೆಗಳಲ್ಲಿರುವ ಸಾವಿರಾರು ಗುಂಡಿಗಳ ನಿರ್ವಹಣೆಯ ಹೊಣೆಗಾರಿಕೆ ಯಾರದ್ದು? ರಾಜಧಾನಿಯ ಜನರಿಗೆ ಭಾಷಣ, ಪ್ರಚಾರ ಮತ್ತು ಹೊಸ ಶುಲ್ಕಗಳು ಬೇಡ. ಜನರಿಗೆ ಬೇಕಿರುವುದು ಗುಂಡಿ ಮುಕ್ತ ರಸ್ತೆ, ಸುರಕ್ಷಿತ ಸಂಚಾರ ಮತ್ತು ಸಮರ್ಪಕ ನಗರ ನಿರ್ವಹಣೆ ಬೇಕಿದೆ.

ಬ್ರಾಂಡ್ ಬೆಂಗಳೂರು ಅಂದ್ರೆ ಏನು?
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೂ ಪ್ರಶ್ನಿಸಿರುವ ಅಶೋಕ್, ಸರ್ಕಾರ ಹೇಳುತ್ತಿರುವ ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಗೂ ನಗರದ ರಸ್ತೆಗಳ ವಾಸ್ತವ ಸ್ಥಿತಿಗೂ ವ್ಯತ್ಯಾಸವಿದೆ ಎಂದು ಆರೋಪಿಸಿದ್ದಾರೆ. ಇನ್ನೊಂದೆಡೆ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಇತ್ತೀಚೆಗೆ ನಗರದ ರಸ್ತೆ ಗುಣಮಟ್ಟ ಸುಧಾರಿಸುವುದು ತಮ್ಮ ಆದ್ಯತೆ ಎಂದು ಹೇಳಿದ್ದು, ರಸ್ತೆ ಗುಂಡಿ, ಜಲಾವೃತ ಪ್ರದೇಶ ಹಾಗೂ ಹಾನಿಗೊಳಗಾದ ರಸ್ತೆಗಳನ್ನು ಆದ್ಯತೆಯ ಮೇಲೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
MUST WATCH : ಹೆಚ್ಚಾಯ್ತು ಬೀದಿ ನಾಯಿಗಳ ಕಾಟ ಇಬ್ಬರು ಬಾಲಕರ ಮೇಲೆ ಡೆಡ್ಲಿ ಅಟ್ಯಾಕ್





