
BENGALURU : ‘KPSC’ ನೇಮಕಾತಿ ಅಕ್ರಮ: ಆರೋಪಿ ಬಸವರಾಜ್ ಕನ್ನಾಳೆ ಡೈರಿಯಲ್ಲಿ ಬಯಲಾಯ್ತು ಲಕ್ಷ ಲಕ್ಷ ಹಣದ ಲೆಕ್ಕ!
BENGALURU : KPSC ನಡೆಸಿದ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಅಧಿಕಾರಿಗಳ ತನಿಖೆ ತೀವ್ರಗೊಂಡಿದ್ದು, ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಮನೆಯಲ್ಲಿ ನಡೆಸಿದ ಪರಿಶೀಲನೆ ವೇಳೆ ಮಹತ್ವದ ಸಾಕ್ಷ್ಯವೊಂದು ಲಭ್ಯವಾಗಿದೆ.
ಡೈರಿಯಲ್ಲಿ ಬಯಲಾಯ್ತು ಲಕ್ಷ ಲಕ್ಷ ಹಣದ ಲೆಕ್ಕ!
ಹೌದು.. ಕನ್ನಾಳೆ ಮನೆಯಲ್ಲಿ ಸಿಕ್ಕಿರುವ ಡೈರಿಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಹೆಸರುಗಳು ಹಾಗೂ ಅವರಿಂದ ಪಡೆದ ಹಣದ ವಿವರಗಳನ್ನು ದಾಖಲಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯಾರಿಂದ ಎಷ್ಟು ಹಣ ಪಡೆದಿದ್ದಾರೆ, ಇನ್ನೆಷ್ಟು ಹಣ ಬರಬೇಕಿದೆ ಎಂಬ ಮಾಹಿತಿಯನ್ನು ಕನ್ನಾಳೆ ಕನ್ನಡದಲ್ಲೇ ಸ್ಪಷ್ಟವಾಗಿ ಬರೆದಿಟ್ಟಿದ್ದಾನೆ
ಡೈರಿಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಕೆಲವರ ಬ್ಯಾಂಕ್ ಖಾತೆ ಸಂಖ್ಯೆಗಳು ಹಾಗೂ ಬಾಕಿ ಹಣದ ವಿವರಗಳೂ ಇವೆ ಎನ್ನಲಾಗಿದೆ. ಕೆಲವೆಡೆ ‘ಜಲ ಸಂಪನ್ಮೂಲ ಇಲಾಖೆ’ ಎಂಬ ಉಲ್ಲೇಖವೂ ಪತ್ತೆಯಾಗಿದ್ದು, ಈ ಮಾಹಿತಿಯನ್ನಾಧರಿಸಿ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ‘ಸೀಕ್ರೆಟ್’ ತರಬೇತಿ?
ಅಕ್ರಮವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಉದ್ದೇಶಿಸಿದ್ದ 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ರಹಸ್ಯವಾಗಿ ತರಬೇತಿ ನೀಡಲು ಕನ್ನಾಳೆ ಮೂರು ಐಷಾರಾಮಿ ವಿಲ್ಲಾಗಳನ್ನು ಬುಕ್ ಮಾಡಿದ್ದ ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಿದ್ದಿದೆ ಎನ್ನಲಾಗಿದೆ.
ಈ ವಿಲ್ಲಾಗಳಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿತ್ತು. ಅಭ್ಯರ್ಥಿಗಳಿಂದ ಮುಂಗಡವಾಗಿ ಲಕ್ಷಾಂತರ ರೂಪಾಯಿ ಪಡೆದು, ಉಳಿದ ಹಣವನ್ನು ನಿರ್ದಿಷ್ಟ ಸಮಯದೊಳಗೆ ಪಾವತಿಸುವಂತೆ ಸೂಚಿಸಲಾಗಿತ್ತು ಎಂಬ ವಿವರಗಳು ಡೈರಿಯಲ್ಲಿ ದಾಖಲಾಗಿವೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
READ THIS : KPSC ಹಗರಣ – ಬಸವರಾಜ್ ಕನ್ನಾಳೆ ಮನೆಯನ್ನೇ ಜಪ್ತಿ ಮಾಡಿದ ಸಿಐಡಿ!

ಡೈರಿಯಲ್ಲಿ ಹಲವು ಅಭ್ಯರ್ಥಿಗಳ ಹೆಸರು
ಡೈರಿಯಲ್ಲಿ ಹೆಸರು ಮತ್ತು ಬಾಕಿ ಹಣದ ಸಂಪೂರ್ಣ ಪಟ್ಟಿ ಲಭ್ಯವಾಗಿದ್ದು, ಅಭ್ಯರ್ಥಿಗಳಾದ ಮಂಜುನಾಥ್ (10 ಲಕ್ಷ ರೂ.), ಪೂಜಾ (10 ಲಕ್ಷ ರೂ.), ಅಶ್ವಿನಿ ಕುಮಾರ್ (10 ಲಕ್ಷ ರೂ.), ಮೋಹನ್ ಕುಮಾರ್ (5 ಲಕ್ಷ ರೂ.), ಸಂಗಮೇಶ (10 ಲಕ್ಷ ರೂ.), ಪದ್ಮಾವತಿ (10 ಲಕ್ಷ ರೂ.) ಹಾಗೂ ಹರೀಶ (10 ಲಕ್ಷ ರೂ.) ಹೀಗೆ ಹಲವರ ಹೆಸರುಗಳ ಮುಂದೆ ಅವರು ನೀಡಬೇಕಾದ ಹಾಗೂ ನೀಡಿರುವ ಹಣದ ವಿವರವನ್ನು ‘ಬಾಕಿ’ ಮತ್ತು ‘ಬರಬೇಕು’ ಎಂದು ಕನ್ನಾಳೆ ಉಲ್ಲೇಖಿಸಿದ್ದಾನೆ.
ಅಕ್ರಮ ಜಾಲದ ಇನ್ನಷ್ಟು ಪ್ರಭಾವಿಗಳ ಹೆಸರುಗಳು ಹೊರಬರುವ ಸಾಧ್ಯತೆ!
ಸದ್ಯ ಡೈರಿಯನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅದರಲ್ಲಿರುವ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಡೈರಿಯಲ್ಲಿ ಹೆಸರುಗಳು ಉಲ್ಲೇಖವಾಗಿರುವ ಅಭ್ಯರ್ಥಿಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿಐಡಿ ಸಿದ್ಧತೆ ನಡೆಸಿದೆ. ಡೈರಿಯಲ್ಲಿರುವ ಮಾಹಿತಿಯ ಆಧಾರದ ಮೇಲೆ KPSC ನೇಮಕಾತಿ ಅಕ್ರಮದ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

MUST WATCH : ಕಾಂಗ್ರೆಸ್ ಅಪನಂಬಿಕೆ ಹರಡೋ ವೈರಸ್ – ಹಿಂಗ್ಯಾಕಂದ್ರು ಶಾಸಕ ಸುರೇಶ್ ಕುಮಾರ್




