
BENGALURU : ನಿಮ್ಮ ಮನೆಯ ಬೋರ್ವೆಲ್ ಬತ್ತೀತು ಹುಷಾರ್!
ಬೆಂಗಳೂರಿಗರೇ ಎಚ್ಚರ.. ನೀವು ಬೋರ್ವೆಲ್ ನೀರನ್ನೇ ಅವಲಂಬಿಸಿದ್ದರೆ ಒಮ್ಮೆ ಈ ಸುದ್ದಿ ನೋಡಿ. ಈ ಬಾರಿ ಮುಂಗಾರು ಅವಧಿಯಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆ ಕೊರತೆ ದಾಖಲಾಗಿದ್ದು, ನಗರದ ಹಲವು ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇನ್ನು ಇದೇ ಪರಿಸ್ಥಿತಿ ಮುಂದುವರಿದ್ರೆ ಮುಂಬರುವ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಬೋರ್ವೆಲ್ಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಆತಂಕ ವ್ಯಕ್ತವಾಗಿದೆ.

43% ಮಳೆ ಕೊರತೆ!
ಹೌದು.. ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ಮುಂಗಾರು ಅವಧಿಯಲ್ಲಿ ಬೆಂಗಳೂರು ನಗರ ಕೇಂದ್ರದಲ್ಲಿ ಸುಮಾರು 313 ಮಿಲಿಮೀಟರ್ ಮಳೆ ದಾಖಲಾಗಿದೆ. ಸಾಮಾನ್ಯ ಪ್ರಮಾಣಕ್ಕೆ ಹೋಲಿಸಿದ್ರೆ ಸುಮಾರು 43% ಮಳೆ ಕೊರತೆ ಕಂಡುಬಂದಿದೆ. ಇನ್ನು ಮಳೆ ಕೊರತೆಗೆ ಕಾರಣವೇನೆಂದ್ರೆ ಜೂನ್, ಜುಲೈ ಹಾಗೂ ಆಗಸ್ಟ್ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು.
ಇದ್ರ ಪರಿಣಾಮ ಮಳೆ ನೀರನ್ನೇ ಪ್ರಮುಖವಾಗಿ ಅವಲಂಬಿಸಿರುವ ನಗರದ ಕೆರೆಗಳ ಮೇಲೂ ಒತ್ತಡ ಹೆಚ್ಚಾಗಿದೆ.
ನಾಗವಾರ, ಹೆಬ್ಬಾಳ, ಹಲಸೂರು ಸೇರಿದಂತೆ ಹಲವು ಪ್ರಮುಖ ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಈ ಬಾರಿ ಮಳೆ ಕೊರತೆಯಿಂದ ಕೆರೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ ಎನ್ನಲಾಗಿದೆ.
READ THIS : ಮಳೆ ಕೊರತೆ – ನೀರು ವ್ಯರ್ಥ ಮಾಡುದ್ರೆ ಬೀಳುತ್ತೆ ಭಾರೀ ದಂಡ!

ಬೋರ್ವೆಲ್ ಬತ್ತೀತು ಹುಷಾರ್!
ಇನ್ನು ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿದುಬರದಿದ್ರೆ ಅಂತರ್ಜಲ ಮರುಪೂರಣದ ಮೇಲೂ ಪರಿಣಾಮ ಬೀರುವ ಆತಂಕ ಇದೆ.
ಹೀಗಾಗಿ ಮುಂದಿನ ಬೇಸಿಗೆ ವೇಳೆಗೆ ಅಂತರ್ಜಲ ಮಟ್ಟ ಮತ್ತಷ್ಟು ಕುಸಿದರೆ, ಬೋರ್ವೆಲ್ ಅವಲಂಬಿಸಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ವಿಶೇಷವಾಗಿ ಕಾವೇರಿ ನೀರಿನ ಸಂಪರ್ಕ ಇಲ್ಲದೆ ಬೋರ್ವೆಲ್ ಹಾಗೂ ಟ್ಯಾಂಕರ್ ನೀರನ್ನೇ ಅವಲಂಬಿಸಿರುವ ಅಪಾರ್ಟ್ಮೆಂಟ್, ವಾಣಿಜ್ಯ ಕಟ್ಟಡ ಮತ್ತು ಕಚೇರಿಗಳಿಗೆ ಸಮಸ್ಯೆ ಎದುರಾಗಬಹುದು. ಅಂತರ್ಜಲ ಕುಸಿದರೆ ಟ್ಯಾಂಕರ್ ನೀರಿನ ಬೇಡಿಕೆ ಹೆಚ್ಚಾಗಿ, ಲಭ್ಯತೆ ಹಾಗೂ ದರದ ಮೇಲೂ ಒತ್ತಡ ಉಂಟಾಗುವ ಆತಂಕ ಎದುರಾಗಿದೆ.

ತೀವ್ರ ಮುಂಗಾರು ಕೊರತೆ ಎದುರಿಸುತ್ತಿರುವ ಕರ್ನಾಟಕ
ಇನ್ನು ಕರ್ನಾಟಕವೂ ಈ ಬಾರಿ ತೀವ್ರ ಮುಂಗಾರು ಕೊರತೆ ಎದುರಿಸಿದ್ದು, ರಾಜ್ಯದಲ್ಲಿ ಸುಮಾರು 35% ಮಳೆ ಕೊರತೆ ದಾಖಲಾಗಿದೆ.
ಮುಂದಿನ ಅವಧಿಯ ಮಳೆಯ ಪ್ರಮಾಣ, ಕೆರೆಗಳ ನೀರಿನ ಸಂಗ್ರಹ ಹಾಗೂ ಅಂತರ್ಜಲ ಮರುಪೂರಣ ಬೆಂಗಳೂರಿನ ಮುಂದಿನ ಬೇಸಿಗೆಯ ನೀರಿನ ಪರಿಸ್ಥಿತಿಗೆ ಅತ್ಯಂತ ಮಹತ್ವದ್ದಾಗಲಿದೆ.
MUST WATCH : ಸತ್ತವರ ಹೆಸರಲ್ಲಿ ವೋಟ್ ಹಾಕ್ತಿದ್ದಾರೆ ಕಾಂಗ್ರೆಸ್ ವಿರುದ್ಧ ಯತ್ನಾಳ್ ಗಂಭೀರ ಆರೋಪ





