
CEC ವಿರುದ್ಧದ 20 ವರ್ಷ ಹಳೆ ಕೇಸ್ ರೀಓಪನ್! 2006ರ ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ
ದೇಶದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ವಿಪಕ್ಷಗಳ ಆಕ್ರೋಶ ಭುಗಿಲೆದ್ದಿರುವಾಗಲೇ, ಅವರ ವಿರುದ್ಧದ ಹಳೇ ಪ್ರಕರಣ ರೀ-ಓಪನ್ ಆಗಿದೆ. 2006ರಲ್ಲಿ ಕೇರಳದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿದ್ದ ವೇಳೆ ನಡೆದಿತ್ತು ಎನ್ನಲಾದ ರಸ್ತೆ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪಗಳ ಕುರಿತು ವಿಜಿಲೆನ್ಸ್ ತನಿಖೆ ನಡೆಸಲು ಕೇರಳ ಸರ್ಕಾರ ಆದೇಶಿಸಿದೆ.
ಭ್ರಷ್ಟಾಚಾರ ಹಾಗೂ ಕೆಲಸದ ವೇಳೆ ಕಿರುಕುಳ ಆರೋಪ
2006ರಲ್ಲಿ ವಿಶ್ವಬ್ಯಾಂಕ್ ನೆರವಿನ ಸುಮಾರು 215 ಕೋಟಿ ರೂಪಾಯಿ ವೆಚ್ಚದ ಕೇರಳ ಸ್ಟೇಟ್ ಟ್ರಾನ್ಸ್ಪೋರ್ಟ್ ಪ್ರಾಜೆಕ್ಟ್ ಅಡಿಯಲ್ಲಿ ಅಂಗಮಾಲಿ–ತಿರುವನಂತಪುರಂ ಎಂ.ಸಿ. ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. PATI-BEL ಎಂಬ ಇಂಡೋ–ಮಲೇಷ್ಯನ್ ಜಂಟಿ ಸಂಸ್ಥೆ ಯೋಜನೆಯ ಕಾಮಗಾರಿ ನಿರ್ವಹಿಸುತ್ತಿತ್ತು. ಇದೇ ಅವಧಿಯಲ್ಲಿ ಜ್ಞಾನೇಶ್ ಕುಮಾರ್ ಕೇರಳ PWD ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ರು.
READ THIS : ತಮಿಳುನಾಡಿನ ‘ವೆಟ್ರಿ ಪಯಣಂ’ ಯೋಜನೆಗೆ ಬೀಳುತ್ತಾ ಬ್ರೇಕ್..?

ಈ ಯೋಜನೆಗೆ ಸಂಬಂಧಿಸಿದ್ದ ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸೀ ಬೀನ್, 2006ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರದ್ದು ಎನ್ನಲಾದ ಪತ್ರಗಳಲ್ಲಿ ಜ್ಞಾನೇಶ್ ಕುಮಾರ್ ಹೆಸರು ಉಲ್ಲೇಖವಾಗಿತ್ತು ಎಂದು ವರದಿಯಾಗಿದ್ದು, ರಸ್ತೆ ಕಾಮಗಾರಿಯ ಬಿಲ್ಗಳ ಪಾವತಿಗೆ ಸಂಬಂಧಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪವೂ ಕೇಳಿಬಂದಿತ್ತು. ಆದ್ರೆ ಈ ಆರೋಪಗಳ ಸತ್ಯಾಸತ್ಯತೆ ಈಗಿನ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

20 ವರ್ಷ ಹಳೆ ಕೇಸ್ ರೀಓಪನ್!
ಇನ್ನು ಎಂಜಿನಿಯರ್ ಸಾವಿನ ಬಳಿಕ 2006ರಲ್ಲೇ ವಿಜಿಲೆನ್ಸ್ ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ಆದ್ರೆ ಬಳಿಕ ಜ್ಞಾನೇಶ್ ಕುಮಾರ್ ಕೇಂದ್ರ ಸೇವೆಗೆ ತೆರಳಿದ ನಂತರ ತನಿಖೆ ಮುಂದುವರಿಯದೆ ಉಳಿದಿತ್ತು ಎನ್ನಲಾಗಿದೆ. ಇದೀಗ ಸುಮಾರು ಎರಡು ದಶಕಗಳ ಬಳಿಕ ಅದೇ ಪ್ರಕರಣದ ತನಿಖೆ ಮತ್ತೆ ಮುನ್ನೆಲೆಗೆ ಬಂದಿದೆ.
ಇತ್ತೀಚೆಗೆ ಕೆಪಿಸಿಸಿ ನಾಯಕ ಮಲಯಿಂಕೀಳು ವೇಣುಗೋಪಾಲ್ ಪ್ರಕರಣದ ಕುರಿತು ತನಿಖೆ ನಡೆಸುವಂತೆ ದೂರು ಸಲ್ಲಿಸಿದ್ದರು. ಹೀಗಾಗಿ ಪುನಃ ವಿಜಿಲೆನ್ಸ್ ತನಿಖೆಗೆ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆದೇಶಿಸಿದ್ದಾರೆ. ಒಟ್ಟಾರೆ 20 ವರ್ಷಗಳ ಹಿಂದಿನ ರಸ್ತೆ ಯೋಜನೆಗೆ ಸಂಬಂಧಿಸಿದ ಆರೋಪಗಳು ಇದೀಗ ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ಗೆ ಹೊಸ ಸಂಕಷ್ಟ ತಂದಿವೆ.

MUST WATCH : ರಾಹುಲ್ ಗಾಂಧಿ ಮುದುಕ ಆಗಿದ್ದಾನೆ ಹೇಗೆ ಕೆಲ್ಸ ಮಾಡ್ಬೇಕು ಅನ್ನೋದು ಗೊತ್ತಿಲ್ಲ




