
SANDALWOOD : ಸುಂಟರಗಾಳಿ ಚಿತ್ರದ `ಸಾರಾಯಿ ಶಾರದೆ’ ಖ್ಯಾತಿಯ ನಟಿ ಲಲಿತಮ್ಮ ಇನ್ನಿಲ್ಲ
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ನಟಿ ಲಲಿತಮ್ಮ ಇಂದು ನಿಧನರಾಗಿದ್ದಾರೆ. ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನಿಮಾದ ‘ಸಾರಾಯಿ ಶಾರದೆ’ ಪಾತ್ರದ ಮೂಲಕ ಮನೆಮಾತಾಗಿದ್ದ ಲಲಿತಮ್ಮ ತಮ್ಮ 65ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ಅವರಿಗೆ ಸ್ಟ್ರೋಕ್ ಆಗಿತ್ತು ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಮದಲ್ಲಿ ಅವರ ಆರೈಕೆ ಮಾಡಲಾಗುತ್ತಿತ್ತು. ಇಂದು ಬೆಳಗ್ಗೆ ಸುಮಾರು 9.30ರ ವೇಳೆಗೆ ಲಲಿತಮ್ಮ ಕೊನೆಯುಸಿರೆಳೆದಿದ್ದಾರೆ.

35 ವರ್ಷಗಳ ಕಾಲ ರಂಗಭೂಮಿಯಲ್ಲಿ ಕಲಾ ಸೇವೆ
ಇನ್ನು ಲಲಿತಮ್ಮ ಅವರ ಕಲಾ ಪಯಣ ಆರಂಭವಾಗಿದ್ದು ರಂಗಭೂಮಿಯಿಂದ. ಸುಮಾರು 35 ವರ್ಷಗಳ ಕಾಲ ರಂಗಭೂಮಿಯಲ್ಲಿ ಕಲಾ ಸೇವೆ ಸಲ್ಲಿಸಿದ್ದ ಅವರು, ನೂರಾರು ನಾಟಕ ಹಾಗೂ ಪ್ರದರ್ಶನಗಳಲ್ಲಿ ಅಭಿನಯಿಸಿದ್ದರು. ಬಳಿಕ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು.
READ THIS : ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನಿಲ್ಲ!

ಹಲವು ಧಾರಾವಾಹಿಗಳಲ್ಲಿ ಅಭಿನಯ
‘ರಂಗೋಲಿ’, ‘ಮಾಂಗಲ್ಯ’, ‘ಮಹಾಮಾಯಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಲಲಿತಮ್ಮ, ‘ಸುಂಟರಗಾಳಿ’, ‘ಜಾಕಿ’, ‘ವಜ್ರಕಾಯ’, ‘ಜಂಗ್ಲಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
SANDALWOOD – `ಸಾರಾಯಿ ಶಾರದೆ’ ಖ್ಯಾತಿಯ ನಟಿ ಲಲಿತಮ್ಮ ಇನ್ನಿಲ್ಲ!
ವಿಶೇಷವಾಗಿ ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನಿಮಾದಲ್ಲಿ ಲಲಿತಮ್ಮ ನಿರ್ವಹಿಸಿದ್ದ ‘ಸಾರಾಯಿ ಶಾರದೆ’ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಪಾತ್ರದ ಬಳಿಕ ಅವರು ‘ಸಾರಾಯಿ ಶಾರದೆ’ ಎಂದೇ ಜನಪ್ರಿಯರಾಗಿದ್ದು, ಸಿನಿಮಾ ಹಾಗೂ ಕಿರುತೆರೆಯಲ್ಲಿ ಹಲವು ಅವಕಾಶಗಳು ಒಲಿದು ಬಂದಿದ್ದವು.

MUST WATCH : ಚಾಲಕನ ನಿರ್ಲಕ್ಷ್ಯಕ್ಕೆ ಭೀಕರ ಅವಘಡ – ಐದಕ್ಕೂ ಹೆಚ್ಚು ವಾಹನಗಳು ಜಖಂ




