ಬಹುಭಾಷಾ ನಟಿ Sowcar Janaki ಇನ್ನಿಲ್ಲ!

ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ, ಬಹುಭಾಷಾ ತಾರೆ ಹಾಗೂ ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ (94) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಮಧ್ಯಾಹ್ನ 1:59ಕ್ಕೆ ಕೊನೆಯುಸಿರೆಳೆದಿದ್ದಾರೆ.
400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯ
ಸುಮಾರು ಏಳು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಾಹುಕಾರ್ ಜಾನಕಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತಮ್ಮ ಅದ್ಭುತ ನಟನಾ ಸಾಮರ್ಥ್ಯದ ಮೂಲಕ ಚಿತ್ರರಂಗದಲ್ಲಿ ವಿಶೇಷ ಸ್ಥಾನಮಾನ ಹಾಗೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

2022ರಲ್ಲಿ ಪದ್ಮಶ್ರೀ ಗೌರವ೧
ಭಾರತೀಯ ಕಲೆ ಮತ್ತು ಚಿತ್ರರಂಗಕ್ಕೆ ನೀಡಿದ ಜೀವಮಾನದ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2022ರಲ್ಲಿ ಸಾಹುಕಾರ್ ಜಾನಕಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ತೆಲುಗಿನ ‘ಸಾಹುಕಾರ್’ ಚಿತ್ರದ ಯಶಸ್ಸಿನ ಬಳಿಕ ಅವರ ಹೆಸರಿನೊಂದಿಗೆ ‘ಸಾಹುಕಾರ್’ ಎಂಬ ಬಿರುದು ಶಾಶ್ವತವಾಗಿ ಗುರುತಿಸಿಕೊಂಡಿತು.
READ THIS : ತಿಪಟೂರು ಅಭಿವೃದ್ಧಿಯ ಹರಿಕಾರ, ಸಂಘದ ಕಟ್ಟಾಳು ಬಿ.ಸಿ. ನಾಗೇಶ್ ಇನ್ನಿಲ್ಲ!

ಕನ್ನಡ ಚಿತ್ರರಂಗದಲ್ಲೂ ಅಚ್ಚಳಿಯದ ಹೆಜ್ಜೆ
ಸಾಹುಕಾರ್ ಜಾನಕಿ ಅವರು ಕನ್ನಡ ಚಿತ್ರರಂಗದಲ್ಲೂ ಹಲವು ಪ್ರಮುಖ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ‘ದೇವಕನ್ನಿಕಾ’ ಅವರ ಮೊದಲ ಕನ್ನಡ ಚಿತ್ರವಾಗಿತ್ತು. ಬಳಿಕ ‘ಗೌರಿ’, ‘ಭಾಗ್ಯಚಕ್ರ’, ‘ಕನ್ಯಾರತ್ನ’, ‘ರತ್ನಗಿರಿ ರಹಸ್ಯ’, ‘ಸ್ಕೂಲ್ ಮಾಸ್ಟರ್’, ‘ತಾಯಿಗೆ ತಕ್ಕ ಮಗ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಡಾ. ರಾಜ್ಕುಮಾರ್ ಅಭಿನಯದ ‘ಶಬ್ದವೇಧಿ’ ಹಾಗೂ ಪುನೀತ್ ರಾಜ್ಕುಮಾರ್ ನಟನೆಯ ‘ಅಭಿ’ ಚಿತ್ರಗಳಲ್ಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡ ಪ್ರೇಕ್ಷಕರ ಮನಗೆದ್ದಿದ್ದರು.
ಅವರ ಕೊನೆಯ ಚಿತ್ರಗಳಲ್ಲಿ ಒಂದಾಗಿ ತಮಿಳಿನ ‘ತಂಬಿ’ ಸಿನಿಮಾ ಗುರುತಿಸಿಕೊಂಡಿದ್ದು, ಇದರಲ್ಲಿ ಕಾರ್ತಿ ಹಾಗೂ ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Sowcar Janaki ಇನ್ನಿಲ್ಲ – ಗಣ್ಯರಿಂದ ಸಂತಾಪ
ಸಾಹುಕಾರ್ ಜಾನಕಿ ಅವರ ನಿಧನಕ್ಕೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ಕಲಾವಿದೆಯೊಬ್ಬರ ಅಗಲಿಕೆಯಿಂದ ಚಿತ್ರರಂಗದಲ್ಲಿ ಶೋಕ ಆವರಿಸಿದೆ.
MUST WATCH : ಅತ್ತಿಗೆ ಜೊತೆ ಅನೈತಿಕ ಸಂಬಂಧದ ಶಂಕೆ – ಯುವಕನಿಗೆ ಚಾಕುವಿನಿಂದ ಇರಿತ.!





