ತಿಪಟೂರು ಅಭಿವೃದ್ಧಿಯ ಹರಿಕಾರ – ಮಾಜಿ ಸಚಿವ BC Nagesh ಇನ್ನಿಲ್ಲ!

ತಿಪಟೂರಿನ ಅಭಿವೃದ್ದಿಯ ಕನಸು ಕಂಡ ನಾಯಕ, ಸರಳತೆ, ಸಜ್ಜನಿಕೆ ಹಾಗೂ ದಕ್ಷ ಆಡಳಿತದ ಮೂಲಕ ಜನಮನ ಗೆದ್ದ ರಾಜಕಾರಣಿ, ಶಿಕ್ಷಣ ಸಚಿವರಾಗಿ ರಾಜ್ಯದ ಗಮನ ಸೆಳೆದ ನಾಯಕ, ತಿಪಟೂರಿನ ಜನರ ಪ್ರೀತಿಯ ಮಾಜಿ ಸಚಿವರಾದ ಬಿ.ಸಿ. ನಾಗೇಶ್ ಇನ್ನಿಲ್ಲ. 67ನೇ ವಯಸ್ಸಿನಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಪುತ್ರಿಯ ನಿವಾಸದಲ್ಲಿ ಕಳೆದ ರಾತ್ರಿ 9.30ರ ಸುಮಾರಿಗೆ ಬಿ.ಸಿ. ನಾಗೇಶ್ ಕೊನೆಯುಸಿರೆಳೆದಿದ್ದಾರೆ.

ಬಿಸಿ ನಾಗೇಶ್ ಸಾವಿಗೆ ಕಂಬಿನಿ ಮಿಡಿದ ಅಭಿಮಾನಿಗಳು
ಕಳೆದ ಕೆಲ ದಿನಗಳಿಂದ ಮೆದುಳಿನ ಗಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದ BC Nagesh ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ನಾಗೇಶ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತಿಪಟೂರು ಸೇರಿದಂತೆ ರಾಜ್ಯದಾದ್ಯಂತ ಅವರ ಅಭಿಮಾನಿಗಳು ಹಾಗೂ ರಾಜಕೀಯ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಇನ್ನು 1959ರ ಜುಲೈ 1 ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ ಬಿ.ಸಿ. ನಾಗೇಶ್. ಅವರು ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದು ಎಬಿವಿಪಿ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟರು. ಬಳಿಕ ಆರ್ಎಸ್ಎಸ್ನ ಸಕ್ರಿಯ ಕಾರ್ಯಕರ್ತರಾಗಿ ಸಂಘಟನೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು.
READ THIS : ಇಂದು ಈ ರಾಶಿಗೆ ವಿಘ್ನವಿನಾಯಕನ ಅನುಗ್ರಹದಿಂದ ವಿಘ್ನಗಳೆಲ್ಲಾ ದೂರ!

ತಾಲ್ಲೂಕು ಆಡಳಿತದ ವೈಫಲ್ಯಗಳ ವಿರುದ್ಧ ಹೋರಾಟ
ಇನ್ನು ರಾಜಕೀಯಕ್ಕೆ ಬರುವ ಮುನ್ನ ಕೊಬ್ಬರಿ ವ್ಯಾಪಾರ ಮಾಡುತ್ತಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ನಾಗೇಶ್, ತಿಪಟೂರಿನ ಜನರ ಸಮಸ್ಯೆಗಳಿಗಾಗಿ ಧ್ವನಿ ಎತ್ತುತ್ತಿದ್ದರು. ತಾಲ್ಲೂಕು ಆಡಳಿತದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ಅವರು, 2008ರಲ್ಲಿ ಮೊದಲ ಬಾರಿಗೆ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾದ್ರು. ಬಳಿಕ 2018ರಲ್ಲೂ ಗೆಲುವು ಸಾಧಿಸಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ್ರು. 2021ರಿಂದ 2023ರವರೆಗೆ ಬಿಜೆಪಿಯ ರಾಜ್ಯ ಸಚಿವ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಾಕ್ಷರತೆ ಹಾಗೂ ಸಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ ನಾಗೇಶ್, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣಾ ಕ್ರಮಗಳಿಗೆ ಒತ್ತು ನೀಡಿದ್ದರು.
ತಿಪಟೂರು ಅಭಿವೃದ್ಧಿಯ ಹರಿಕಾರ
ಇನ್ನು ತಿಪಟೂರಿನ ಅಭಿವೃದ್ಧಿಯ ವಿಚಾರ ಬಂದಾಗ ಬಿ.ಸಿ. ನಾಗೇಶ್ ಅವರು ದಕ್ಷ ಅಧಿಕಾರಿಗಳ ತಂಡದೊಂದಿಗೆ ಕೆಲಸ ಮಾಡಿ ತಿಪಟೂರಿನ ಅಭಿವೃದ್ಧಿಗೆ ಹೊಸ ರೂಪ ನೀಡಿದ್ದರು. ಹೀಗಾಗಿಯೇ ಅವರು ತಿಪಟೂರು ಅಭಿವೃದ್ಧಿಯ ಹರಿಕಾರ ಎಂದೇ ಜನರ ನಡುವೆ ಗುರುತಿಸಿಕೊಂಡಿದ್ದರು. ತಿಪಟೂರಿನ ಜನರ ಹಿತವನ್ನೇ ಸದಾ ಮುಂದಿಟ್ಟುಕೊಂಡಿದ್ದ ನಾಗೇಶ್ ಅವರ ಅಗಲಿಕೆ ಕ್ಷೇತ್ರದ ಜನರಿಗೆ ತುಂಬಲಾರದ ನಷ್ಟವಾಗಿದೆ.


ಮಾಜಿ ಸಚಿವರ ನಾಗೇಶ್ ನಿಧನಕ್ಕೆ ಗಣ್ಯರ ಕಂಬನಿ
ಸದ್ಯ ಪತ್ನಿ ವೀಣಾ, ಪುತ್ರಿ ಶಾರದ ಹಾಗೂ ಪುತ್ರ ವಿಶ್ವದೀಪ ಸೇರಿದಂತೆ ಅಪಾರ ಬಂಧು-ಮಿತ್ರರು, ಅಭಿಮಾನಿಗಳನ್ನು ಬಿ.ಸಿ. ನಾಗೇಶ್ ಅಗಲಿದ್ದು, ಒಬ್ಬ ದಕ್ಷ ರಾಜಕಾರಣಿ, ಸರಳ ವ್ಯಕ್ತಿತ್ವದ ನಾಯಕನನ್ನು ಕಳೆದುಕೊಂಡು ಅಭಿಮಾನಿಗಳು, ರಾಜಕಾರಣಿಗಳು, ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ.
MUST WATCH : TUMAKURU DC ನಿವಾಸದಲ್ಲಿ ಬೆಂಕಿ – SHORT CIRCUIT ನಿಂದ ಅಗ್ನಿ ಅವಘಡ





