Bengaluru : ಬರದ ಛಾಯೆ ನಡುವೆ BWSSB ಕಠಿಣ ಕ್ರಮ: ನೀರು ವ್ಯರ್ಥ ಮಾಡಿದರೆ ದಂಡ ಗ್ಯಾರಂಟಿ!

Bengaluru : ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ನೀರಿನ ಅಭಾವದ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕುಡಿಯುವ ನೀರಿನ ದುರ್ಬಳಕೆ ತಡೆಗೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಕುಡಿಯುವ ನೀರನ್ನು ಅನಗತ್ಯವಾಗಿ ಬಳಸಿದರೆ ₹5,000 ದಂಡ ವಿಧಿಸಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.
ಈಜುಕೊಳಗಳಿಗೆ ನೀರು ತುಂಬುವುದು ಸಂಪೂರ್ಣ ನಿಷೇಧ
ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳಾ ಈ ಕುರಿತು ಮಾಹಿತಿ ನೀಡಿ, ಕುಡಿಯುವ ನೀರಿನಿಂದ ವಾಹನ ತೊಳೆಯುವುದು, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬಳಸುವುದು ಹಾಗೂ ಈಜುಕೊಳಗಳಿಗೆ ನೀರು ತುಂಬುವುದು ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ನೀರಿನ ಪ್ರತಿಯೊಂದು ಹನಿಯನ್ನೂ ಸಂರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಹಲವು ಜಲಾಶಯಗಳ ನೀರಿನ ಮಟ್ಟ ಕುಸಿತ
ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಹಲವು ಜಿಲ್ಲೆಗಳಲ್ಲಿ ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿದ್ದು, ಕೆರೆ-ಕಟ್ಟೆಗಳು ಬರಿದಾಗುತ್ತಿವೆ.
ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿದ ಬೆಳೆಗಳಿಗೆ ನೀರಿನ ಅಭಾವ ಎದುರಾಗಿದೆ.
ಇದನ್ನು ಓದಿ : ಬೆಂಗಳೂರು ಜನರಿಗೆ ಜಲಮಂಡಳಿ ಬಿಗ್ ಶಾಕ್..!
ಬೆಳಗಾವಿ ಜಿಲ್ಲೆಯಲ್ಲಿ ಶೇ.29ರಷ್ಟು ಮಳೆ ಕೊರತೆ
ಬೆಳಗಾವಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಶೇ.29ರಷ್ಟು ಮಳೆ ಕೊರತೆ ದಾಖಲಾಗಿದ್ದು, ಈಗಾಗಲೇ ಶೇ.68ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಸೋಯಾಬಿನ್, ಹೆಸರು, ಉದ್ದು, ಕಬ್ಬು ಹಾಗೂ ಭತ್ತದ ಬೆಳೆಗಳಿಗೆ ಸಮರ್ಪಕ ಮಳೆಯ ಕೊರತೆಯಿಂದ ರೈತರು ಆತಂಕದಲ್ಲಿದ್ದಾರೆ.

ಮಲೆನಾಡು ಭಾಗಗಳಲ್ಲಿ ಸಾಧಾರಣ ಮಳೆ
ಇನ್ನೊಂದೆಡೆ, ಬೆಳಗಾವಿ, ಹುಬ್ಬಳ್ಳಿ ಹಾಗೂ ಹಾಸನ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ರೈತರಿಗೆ ಸ್ವಲ್ಪ ಮಟ್ಟಿನ ನಿರಾಳತೆ ದೊರೆತಿದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮಳೆ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ನೀರನ್ನು ಮಿತವಾಗಿ ಬಳಸುವಂತೆ ಹಾಗೂ ಕುಡಿಯುವ ನೀರನ್ನು ಅನಗತ್ಯ ಕಾರ್ಯಗಳಿಗೆ ಬಳಸದೇ ಸಹಕರಿಸುವಂತೆ ಜಲಮಂಡಳಿ ಸಾರ್ವಜನಿಕರಿಗೆ ಮನವಿ ಮಾಡಿದೆ.

ಇದನ್ನು ನೋಡಿ : ಚಿನ್ನ ಕದ್ದು ತಗ್ಲಾಕೊಂಡ SHORT MOVIE ನಟ – ಕ್ಯಾಮೆರಾ ಮುಂದೆ ನಟ, ಕ್ಯಾಮೆರಾ ಹಿಂದೆ ಕಳ್ಳ




