ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ ಹೇಳಿಕೆ: KPCC ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ಗೆ ಲೀಗಲ್ ನೋಟಿಸ್

ಪಾಕ್ ಅಧಿಕಾರಿಗಳ ಜೊತೆ ಬಿಜೆಪಿ ನಾಯಕ ರಾಮ್ ಮಾಧವ್ ಗೌಪ್ಯ ಸಭೆ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಇದೀಗ ಲೀಗಲ್ ನೋಟಿಸ್ ನೀಡಲಾಗಿದೆ. ರಾಮ್ ಮಾಧವ್ ಹೆಸರಿಗೆ ಕಳಂಕಗೊಳಿಸಲು ಪ್ರಯತ್ನಿಸಿರುವುದಲ್ಲದೆ ಅವರ ಇಮೇಜ್ ಮತ್ತು ಖ್ಯಾತಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಎನ್ಎಸ್ ಸೆಕ್ಷನ್ 356ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೆ, ಹರಿಪ್ರಸಾದ್ ರಾಮ್ ಮಾಧವ್ಗೆ ಕ್ಷಮೆ ಕೇಳಬೇಕೆಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ : KPCC’ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ
ಬಿ.ಕೆ. ಹರಿಪ್ರಸಾದ್, ಬಿಜೆಪಿ ಚುನಾವಣಾ ಉಸ್ತುವಾರಿ ರಾಮ್ ಮಾಧವ್ ಅವರು ಕೊಲಂಬೊ ಹಾಗೂ ಲಂಡನ್ನಲ್ಲಿ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ನಾಲ್ಕು ಗೌಪ್ಯ ಸಭೆ ನಡೆಸಿದ್ದಾರೆ ಎಂದು ಬೆಂಗಳೂರಿನಲ್ಲಿ ಗಂಭೀರ ಆರೋಪ ಮಾಡಿದ್ದರು. ಲಂಡನ್ನ ಹಿಲ್ಟನ್ ಹೋಟೆಲ್ನಲ್ಲಿ ಪಾಕಿಸ್ತಾನದ ಐಎಸ್ಐ ಮಾಜಿ ಮೇಜರ್ ಜನರಲ್ ಸೇರಿದಂತೆ ಕೆಲ ಅಧಿಕಾರಿಗಳೊಂದಿಗೆ ರಹಸ್ಯ ಸಭೆ ನಡೆದಿದೆ. ಆ ಸಭೆಯಲ್ಲಿ ಏನು ಚರ್ಚೆಯಾಯಿತು ಎಂಬುದನ್ನು ರಾಮ್ ಮಾಧವ್ ಬಹಿರಂಗಪಡಿಸಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದ್ದರು. ಪಾಕ್ ಜೊತೆ ಚರ್ಚಿಸುವಂತೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ ಅಂತಲೂ ದೂರಿದ್ದರು.

‘ಆಪರೇಷನ್ ಸಿಂಧೂರ್’ ನಡೆದ ಕೆಲವೇ ತಿಂಗಳಲ್ಲಿ ಈ ಸಭೆಗಳು ನಡೆದಿವೆ. ರಾಮ್ ಮಾಧವ್ ಅವರು ವಿದೇಶಾಂಗ ಸಚಿವರೂ ಅಲ್ಲ, ಸಂಸದರೂ ಅಲ್ಲ, ಶಾಸಕರೂ ಅಲ್ಲ. ಹಾಗಿದ್ದರೂ ಅವರಿಗೆ ಈ ರೀತಿಯ ಸಭೆ ನಡೆಸುವ ಅಧಿಕಾರವನ್ನು ಯಾರು ನೀಡಿದರು ಎಂದು ಬಹಿರಂಗಪಡಿಸಲಿ ಎಂದು ಹರಿಪ್ರಸಾದ್ ಹೇಳಿದ್ದರು.

ಇದನ್ನು ನೋಡಿ : ಈ ಕೂಡಲೇ BLOಗಳನ್ನು ಬಂಧಿಸಬೇಕು – ಮಾಜಿ ಸಚಿವ SRIRAMULU ಹೀಗ್ಯಾಕಂದ್ರು?




