ಆಗಸ್ಟ್ 8ಕ್ಕೆ Toxic ಟ್ರೇಲರ್ ರಿಲೀಸ್; ಅಧಿಕೃತ ಘೋಷಣೆ ಮಾಡಿದ ಯಶ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಹೊಸ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸುದ್ದಿ ನೀಡಿದೆ. ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಟ್ರೇಲರ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್
ಯಶ್ ಅವರ ಖಡಕ್ ಲುಕ್ ಹೊಂದಿರುವ ಹೊಸ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪೋಸ್ಟರ್ನಲ್ಲಿ ಯಶ್ ನಿರ್ವಹಿಸುತ್ತಿರುವ ‘ರಾಯಾ’ ಪಾತ್ರದ ನೆರಳು ಮಾತ್ರ ಕಾಣಿಸುತ್ತಿದ್ದು, ಕೈಯಲ್ಲಿರುವ ಟಾಮಿ ಗನ್ ಚಿತ್ರದ ಆ್ಯಕ್ಷನ್ ಹಿನ್ನೆಲೆಯ ಬಗ್ಗೆ ಕುತೂಹಲ ಮೂಡಿಸಿದೆ.

ಬೆಂಗಳೂರಿನಲ್ಲಿ ಟ್ರೇಲರ್ ಬಿಡುಗಡೆ
‘ಟಾಕ್ಸಿಕ್’ ಚಿತ್ರದ ಟ್ರೇಲರ್ ಅನ್ನು ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ವಿಶೇಷವೆಂದರೆ ಇದೇ ದಿನ ಚಿತ್ರದ ಚಿತ್ರೀಕರಣ ಆರಂಭವಾಗಿ ಎರಡು ವರ್ಷ ಪೂರ್ಣಗೊಳ್ಳಲಿದೆ. ಚಿತ್ರದ ಪ್ರಚಾರ ಕಾರ್ಯಗಳಿಗೆ ಬೆಂಗಳೂರಿನಿಂದಲೇ ಚಾಲನೆ ನೀಡಲಾಗುತ್ತಿದ್ದು, ಟ್ರೇಲರ್ ಲಾಂಚ್ ಕಾರ್ಯಕ್ರಮ ಭರ್ಜರಿಯಾಗಿ ನಡೆಯುವ ನಿರೀಕ್ಷೆ ಇದೆ.
ಇದನ್ನು ಓದಿ : ಭಾರತದ ಬಹುನಿರೀಕ್ಷಿತ ಸಿನಿಮಾಗಳ ಲಿಸ್ಟ್ನಲ್ಲಿ ಟಾಕ್ಸಿಕ್ಗೆ 1ನೇ ಸ್ಥಾನ

ಟ್ರೇಲರ್ನಲ್ಲಿ ಚಿತ್ರದ ಜಗತ್ತು ಅನಾವರಣ
ಈವರೆಗೆ ಬಿಡುಗಡೆಯಾದ ಚಿತ್ರದ ಟೀಸರ್, ಪೋಸ್ಟರ್ ಹಾಗೂ ಇತರ ಝಲಕ್ಗಳು ಹಲವು ರಹಸ್ಯಗಳನ್ನು ಉಳಿಸಿಕೊಂಡಿದ್ದವು. ಚಿತ್ರದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.
ಇದೀಗ ಬಿಡುಗಡೆಯಾಗಲಿರುವ ಟ್ರೇಲರ್ನಲ್ಲಿ ಚಿತ್ರದ ಕಥೆಯ ಒಂದು ಸಣ್ಣ ಎಳೆ, ಪಾತ್ರಗಳ ಹಿನ್ನೆಲೆ ಹಾಗೂ ಸಿನಿಮಾದ ಭವ್ಯ ಜಗತ್ತಿನ ಪರಿಚಯ ಸಿಗಲಿದೆ ಎನ್ನಲಾಗಿದೆ.
ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾ ಭಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದ್ದು, ಅದ್ದೂರಿ ಮೇಕಿಂಗ್ ಮೂಲಕ ಗಮನ ಸೆಳೆಯುವ ನಿರೀಕ್ಷೆಯಿದೆ.
ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆ
Toxic ಚಿತ್ರದಲ್ಲಿ ದೊಡ್ಡ ತಾರಾಗಣವೇ ಒಂದಾಗಿದೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

ಇದನ್ನು ನೋಡಿ : ಭುಗಿಲೆದ್ದ ಅನ್ನದಾತರ ಆಕ್ರೋಶ – ಜಾನುವಾರು ಸಮೇತ ಬೀದಿಗಿಳಿದು PROTEST




