ಸಚಿವ ಸಂಪುಟ ವಿಸ್ತರಣೆ ಕಸರತ್ತು – 18 ಮಂದಿಗೆ ಸಚಿವ ಸ್ಥಾನ ಫಿಕ್ಸ್?

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಮುಂದುವರಿದಿದ್ದು, ಸೋಮವಾರ ಸಂಜೆ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯುವುದು ಬಹುತೇಕ ಖಚಿತವಾಗಿದೆ.
ಆದರೆ ಸಚಿವ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಇನ್ನೂ ರಹಸ್ಯವಾಗಿದ್ದು, ಸಚಿವಾಕಾಂಕ್ಷಿ ಶಾಸಕರಲ್ಲಿ ಆತಂಕ ಹಾಗೂ ಕುತೂಹಲ ಹೆಚ್ಚಾಗಿದೆ.
ರಾಹುಲ್ ಗಾಂಧಿ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆ
ದೆಹಲಿಯಲ್ಲಿ ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನೂತನ ಸಚಿವರ ಸಂಭವನೀಯ ಪಟ್ಟಿ ಸಿದ್ಧಗೊಂಡಿದೆ ಎನ್ನಲಾಗಿದ್ದು, ಅಂತಿಮ ಅನುಮೋದನೆ ಮಾತ್ರ ಬಾಕಿ ಉಳಿದಿದೆ. ಹೈಕಮಾಂಡ್ನ ಅಂತಿಮ ನಿರ್ಧಾರದ ನಿರೀಕ್ಷೆಯಲ್ಲಿ ಹಲವು ಶಾಸಕರು ಕಾದು ಕುಳಿತಿದ್ದಾರೆ.
16ರಿಂದ 18 ಶಾಸಕರಿಗೆ ಸಚಿವ ಸ್ಥಾನ ಸಾಧ್ಯತೆ
ಮೂಲಗಳ ಪ್ರಕಾರ, ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಸುಮಾರು 16ರಿಂದ 18 ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.
ಮುಂದಿನ ರಾಜಕೀಯ ತಂತ್ರಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಎರಡು ಖಾತೆಗಳನ್ನು ಸದ್ಯಕ್ಕೆ ಖಾಲಿ ಉಳಿಸಿಕೊಳ್ಳುವ ಬಗ್ಗೆಯೂ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇದನ್ನು ಓದಿ : ಸಚಿವ ಸಂಪುಟ ವಿಸ್ತರಣೆ ಕಸರತ್ತು – ಖರ್ಗೆ ಭೇಟಿಯಾದ ಸಿಎಂ, ಡಿಸಿಎಂ

ಯಾರ ಹೆಸರು ಸೇರ್ಪಡೆಯಾಗಲಿದೆ?
ದೆಹಲಿಯ ಅಂತಿಮ ಸರ್ಕಸ್ನಲ್ಲಿ ಯಾರ ಹೆಸರು ಸೇರ್ಪಡೆಯಾಗಲಿದೆ ಅಥವಾ ಯಾರ ಹೆಸರು ಕೈಬಿಡಲಿದೆ ಎಂಬುದು ಭಾನುವಾರ ರಾತ್ರಿಯವರೆಗೂ ಯಾರಿಗೂ ಖಾತರಿ ಇಲ್ಲದಂತಾಗಿದೆ.
ನಾಯಕತ್ವದ ಕಡೆಯಿಂದಾಗಲಿ ಅಥವಾ ಎಐಸಿಸಿ ಮೂಲಗಳಿಂದಾಗಲಿ ಯಾವುದೇ ಶಾಸಕರಿಗೆ ಖಚಿತ ಸಂದೇಶ ತಲುಪಿಲ್ಲ.
ಅಂತಿಮ ಚರ್ಚೆ ಬಳಿಕ ಪಟ್ಟಿ ಪ್ರಕಟ ಸಾಧ್ಯತೆ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸುವ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಅಂತಿಮ ಸುತ್ತಿನ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಸಚಿವರ ಪಟ್ಟಿಗೆ ಅಂತಿಮ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ.
ಸಚಿವ ಸಂಪುಟ ವಿಸ್ತರಣೆ ಸೋಮವಾರ ಸಂಜೆ ಶೇ.99ರಷ್ಟು ನಡೆಯುವುದು ನಿಶ್ಚಿತ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಲೋಕಭವನದ ಅಧಿಕಾರಿಗಳಿಗೆ ಈಗಾಗಲೇ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಇದನ್ನು ನೋಡಿ : MLC ಟಿಕೆಟ್ ಕೊಡಿಸೋದಾಗಿ ದೋಖಾ – ಮಹಿಳೆಗೆ ಕೋಟ್ಯಾಂತರ ರೂ. ವಂಚನೆ




