ಬಿಎಂಟಿಸಿ ETM ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ಕೆಲವು ಮಾರ್ಗಗಳಲ್ಲಿ ನಿಗಮಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದರೆ, ಮತ್ತೊಂದೆಡೆ ಪ್ರಯಾಣಿಕರು ಹೆಚ್ಚುವರಿ ದರ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಎಂಟಿಸಿಯ (BMTC) ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್ (ETM) ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕಳೆದ ನಾಲ್ಕೈದು ದಿನಗಳಿಂದ ನಿಗಮಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇದೇ ವೇಳೆ ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರು ಹೆಚ್ಚುವರಿ ದರ ಪಾವತಿಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.
ಬೊಮ್ಮಸಂದ್ರ-ಜಿಗಣಿ ಮಾರ್ಗದ ಬಸ್ಗಳಲ್ಲಿ ETM ಯಂತ್ರವು ನಿಗದಿತ ಸ್ಟೇಜ್ಗಿಂತ ಒಂದು ಸ್ಟೇಜ್ ಕಡಿಮೆ ತೋರಿಸುತ್ತಿದೆ.
ಇದರಿಂದ ಪ್ರತಿ ಪ್ರಯಾಣಿಕರಿಂದ ಸುಮಾರು 5 ರೂಪಾಯಿ ಕಡಿಮೆ ದರ ವಸೂಲಾಗುತ್ತಿದ್ದು, ನಿಗಮಕ್ಕೆ ಪ್ರತಿದಿನ ಸಾವಿರಾರು ರೂಪಾಯಿ ನಷ್ಟ ಉಂಟಾಗುತ್ತಿದೆ.

ಹೊಸ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ
ಇತ್ತೀಚೆಗೆ ‘ಚಕ್ರ’ ಹೆಸರಿನ ಹೊಸ ಮಾರ್ಗವನ್ನು ಪರಿಚಯಿಸಲಾಗಿತ್ತು. ಆದರೆ, ETM ಯಂತ್ರದಲ್ಲಿ ಸ್ಟೇಜ್ಗಳ ಮಾಹಿತಿ ಸರಿಯಾಗಿ ನಮೂದಾಗದ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ.
ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
MUST READ : ರುಕ್ಮಿಣಿ ವಸಂತ್ ಬಿಕಿನಿ ಫೋಟೋ ಹರಿಬಿಟ್ಟ ಮೂವರು ಅರೆಸ್ಟ್!

ಕಂಡಕ್ಟರ್ಗಳಲ್ಲಿ ಆತಂಕ
ಟಿಕೆಟ್ ಪರಿಶೀಲನಾ ಅಧಿಕಾರಿಗಳು ಬಂದರೆ ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬ ಆತಂಕದಲ್ಲಿ ಕಂಡಕ್ಟರ್ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಸಮಸ್ಯೆಯ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮವಾಗಿಲ್ಲ ಎನ್ನಲಾಗಿದೆ.

ಆನೇಕಲ್ನಿಂದ ಮೆಜೆಸ್ಟಿಕ್ಗೆ ಸಂಚರಿಸುವ 365ಪಿ ಮಾರ್ಗದ ಬಸ್ಗಳ ETM ಯಂತ್ರದಲ್ಲೂ ತಾಂತ್ರಿಕ ದೋಷ ಕಂಡುಬಂದಿದೆ. ಈ ಮಾರ್ಗದಲ್ಲಿ ಒಂದು ಸ್ಟೇಜ್ ಹೆಚ್ಚಾಗಿ ತೋರಿಸುತ್ತಿದ್ದು, ಪ್ರಯಾಣಿಕರು ಸುಮಾರು 6 ರೂಪಾಯಿ ಹೆಚ್ಚುವರಿ ದರ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಅಧಿಕಾರಿಗಳಿಂದ ಪರಿಹಾರಕ್ಕೆ ಒತ್ತಾಯ
ಒಂದು ಮಾರ್ಗದಲ್ಲಿ ನಿಗಮಕ್ಕೆ ನಷ್ಟ ಉಂಟಾಗುತ್ತಿದ್ದರೆ, ಮತ್ತೊಂದು ಮಾರ್ಗದಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹೀಗಾಗಿ ETM ಯಂತ್ರದಲ್ಲಿನ ತಾಂತ್ರಿಕ ದೋಷವನ್ನು ಶೀಘ್ರ ಸರಿಪಡಿಸಿ ಪ್ರಯಾಣಿಕರು ಹಾಗೂ ನಿಗಮಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
MUST WATCH : ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಚಿಕಿತ್ಸೆಗಾಗಿ ಬಡ ರೋಗಿಗಳ ಪರದಾಟ | SIRA NEWS |




