ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಬೀಳುತ್ತೆ ಭಾರೀ ದಂಡ – ಜು.1 ರಿಂದ ಹೊಸ ನಿಯಮ

ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಬಿಗ್ ಶಾಕ್ವೊಂದನ್ನು ನೀಡಿದೆ. ಜುಲೈ 1ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ವಿವಿಧ ಉಲ್ಲಂಘನೆಗಳಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಪ್ರಯಾಣಿಕರಲ್ಲಿ ಶಿಸ್ತು ಮೂಡಿಸುವುದು ಹಾಗೂ ರೈಲ್ವೆ ಸೇವೆಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸುಮಾರು 13 ವರ್ಷಗಳ ಬಳಿಕ ರೈಲ್ವೆ ಇಲಾಖೆ ದಂಡದ ಮೊತ್ತವನ್ನು ಪರಿಷ್ಕರಿಸಿದೆ.

ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಬೀಳುತ್ತೆ ಭಾರೀ ದಂಡ!
ಇದುವರೆಗೆ ಟಿಕೆಟ್ ಇಲ್ಲದೇ ಪ್ರಯಾಣಿಸಿದರೆ ಟಿಕೆಟ್ ದರದ ಜೊತೆಗೆ 250 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಟಿಕೆಟ್ ದರದ ಜೊತೆಗೆ 500 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಮಹಿಳೆಯರಿಗಾಗಿ ಮೀಸಲಾದ ಕೋಚ್ಗೆ ಅನಧಿಕೃತವಾಗಿ ಪ್ರವೇಶಿಸುವ ಪುರುಷ ಪ್ರಯಾಣಿಕರಿಗೆ 2,500 ರೂಪಾಯಿ ವರೆಗೆ ದಂಡ ವಿಧಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಇದನ್ನು ಓದಿ : ಜೂನ್ 1ರಿಂದ ರೈಲ್ವೆ ವೈಟಿಂಗ್ ಲಿಸ್ಟ್ ನಿಯಮಗಳಲ್ಲಿ ಬದಲಾವಣೆ

ನಿಷೇಧಿತ ವಸ್ತುಗಳನ್ನ ಸಾಗಿಸುವವರಿಗೆ 10,000 ರೂ. ವರೆಗೆ ದಂಡ
ಇನ್ನು ರೈಲ್ವೆ ನಿಲ್ದಾಣ ಅಥವಾ ರೈಲ್ವೆ ಆವರಣದಲ್ಲಿ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವುದು, ವಸ್ತುಗಳನ್ನು ಮಾರಾಟ ಮಾಡುವುದು ಅಥವಾ ಭಿಕ್ಷೆ ಬೇಡುವುದಕ್ಕೂ 2,000 ರೂಪಾಯಿ ದಂಡ ವಿಧಿಸಲಾಗುತ್ತದೆ. ರೈಲಿನಲ್ಲಿ ಅಥವಾ ರೈಲ್ವೆ ಆವರಣದಲ್ಲಿ ನಿಷೇಧಿತ ವಸ್ತುಗಳನ್ನು ಸಾಗಿಸುವವರಿಗೆ 10 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ.

ಸಹ ಪ್ರಯಾಣಿಕರಿಗೆ ಕಿರುಕುಳ ನೀಡಿದ್ರೆ ಜೈಲು ಶಿಕ್ಷೆ
ಕುಡಿದು ಗಲಾಟೆ ಮಾಡಿದರೆ 24 ಗಂಟೆಗಳವರೆಗೆ ಜೈಲು ಶಿಕ್ಷೆ, 1,000 ರೂ. ದಂಡ ಅಥವಾ ಸಮುದಾಯ ಸೇವೆ ವಿಧಿಸಬಹುದು. ಅಶ್ಲೀಲ ವರ್ತನೆ ತೋರಿದರೆ ಅಥವಾ ಸಹ ಪ್ರಯಾಣಿಕರಿಗೆ ಕಿರುಕುಳ ನೀಡಿದರೆ 1,000 ರೂ. ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ಇದನ್ನು ನೋಡಿ : ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ರೈತರು ಜೂ. 22ರಂದು ಬೃಹತ್ ಪ್ರತಿಭಟನೆಗೆ ಕರೆ




