
Bank Strike : 3 ದಿನಗಳ ಕಾಲ ಬ್ಯಾಂಕ್ ಮುಷ್ಕರ! ಕೆನರಾ ಬ್ಯಾಂಕ್ನಿಂದ ಮುನ್ನೆಚ್ಚರಿಕೆ ಕ್ರಮ, ಏನದು?
ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ನಡೆಯಲಿರುವ ಮುಷ್ಕರದಿಂದ ಬ್ಯಾಂಕ್ ಶಾಖೆಗಳಲ್ಲಿ ನಡೆಯುವ ಹಲವು ನೇರ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಮೂರು ದಿನಗಳ ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಸೆಪ್ಟೆಂಬರ್ 27ರ ಭಾನುವಾರ ಬ್ಯಾಂಕ್ ಶಾಖೆಗಳನ್ನು ತೆರೆಯುವಂತೆ ಸೂಚಿಸಲಾಗಿದೆ. ಹೀಗಾಗಿ ಬ್ಯಾಂಕ್ಗೆ ತೆರಳಿ ಮಾಡಿಸಬೇಕಿರುವ ತುರ್ತು ಕೆಲಸಗಳಿದ್ದರೆ ಮುಷ್ಕರ ಆರಂಭಕ್ಕೂ ಮುನ್ನವೇ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.

ಏಕೆ ಮುಷ್ಕರ?
ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಲ್ಲಿ ವಾರದ ಐದು ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ತರುವುದು ಪ್ರಮುಖವಾಗಿದೆ. ಪ್ರಸ್ತುತ ಬ್ಯಾಂಕ್ಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದ್ದು, ಉಳಿದ ಶನಿವಾರಗಳಲ್ಲಿ ಕೆಲಸ ನಡೆಯುತ್ತದೆ. ತಿಂಗಳ ಎಲ್ಲ ಶನಿವಾರಗಳಿಗೂ ರಜೆ ನೀಡಬೇಕು ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ಕೆಲಸದ ಅವಧಿಯನ್ನು ಸ್ವಲ್ಪ ಹೆಚ್ಚಿಸುವ ಮೂಲಕ ಗ್ರಾಹಕರ ಸೇವೆಗೆ ತೊಂದರೆಯಾಗದಂತೆ ನೋಡಿಕೊಳ್ಳಬಹುದು ಎಂಬುದು ನೌಕರರ ವಾದವಾಗಿದೆ.
ಇದರೊಂದಿಗೆ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PLI) ಯೋಜನೆಯಲ್ಲಿ ಬದಲಾವಣೆ, ಈ ಕುರಿತು ಮಾತುಕತೆ ಮುಂದುವರಿಸುವುದು ಹಾಗೂ ಬಾಕಿ ಉಳಿದಿರುವ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಯೂನಿಯನ್ಗಳು ಮುಂದಿಟ್ಟಿವೆ.
UFBUಯಲ್ಲಿ ಏಳು ಪ್ರಮುಖ ಬ್ಯಾಂಕ್ ಒಕ್ಕೂಟಗಳು ಸೇರಿದ್ದು, ದೇಶದ ಬ್ಯಾಂಕಿಂಗ್ ಕ್ಷೇತ್ರದ ದೊಡ್ಡ ಪ್ರಮಾಣದ ಸಿಬ್ಬಂದಿಯನ್ನು ಪ್ರತಿನಿಧಿಸುತ್ತಿರುವುದಾಗಿ ಸಂಘಟನೆಗಳು ಹೇಳಿಕೊಂಡಿವೆ.

ಯಾವ ಸೇವೆಗಳು ವ್ಯತ್ಯಯ?
ಮುಷ್ಕರದ ಅವಧಿಯಲ್ಲಿ ಸಿಬ್ಬಂದಿ ನೇರವಾಗಿ ನಿರ್ವಹಿಸುವ ಬ್ಯಾಂಕ್ ಶಾಖೆಗಳ ಸೇವೆಗಳಿಗೆ ಹೆಚ್ಚಿನ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ,
- ನಗದು ಜಮೆ ಮತ್ತು ಹಣ ಡ್ರಾ ಮಾಡುವುದು
- ಚೆಕ್ ಕ್ಲಿಯರೆನ್ಸ್
- ಡಿಮ್ಯಾಂಡ್ ಡ್ರಾಫ್ಟ್ (DD) ಪಡೆಯುವುದು
- ಹೊಸ ಖಾತೆ ತೆರೆಯುವುದು
- ಲಾಕರ್ಗೆ ಸಂಬಂಧಿಸಿದ ಸೇವೆಗಳು
- ಇತರ ಶಾಖಾ ಆಧಾರಿತ ಬ್ಯಾಂಕಿಂಗ್ ಸೇವೆಗಳು
ಮುಷ್ಕರದಿಂದ ಪರಿಣಾಮಕ್ಕೊಳಗಾಗಬಹುದು.
ಆನ್ಲೈನ್ ಸೇವೆಗಳು ಮುಂದುವರಿಕೆ
ಯುಪಿಐ, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಸಾಮಾನ್ಯವಾಗಿ ಲಭ್ಯವಿರುವ ನಿರೀಕ್ಷೆಯಿದೆ. ಎಟಿಎಂಗಳಲ್ಲಿ ನಗದು ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ. Google Pay, PhonePe ಸೇರಿದಂತೆ UPI ಆಧಾರಿತ ಪಾವತಿ ವ್ಯವಸ್ಥೆಗಳು ಹಾಗೂ ಬ್ಯಾಂಕ್ಗಳ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರು ಪರ್ಯಾಯವಾಗಿ ಬಳಸಬಹುದಾಗಿದೆ.
READ THIS : ಸತತ ನಾಲ್ಕು ದಿನ Bank ಸೇವೆ ಬಂದ್! ಯಾಕೆ..?

ಸೆ.30ರಂದು ಅರ್ಧವಾರ್ಷಿಕ ಲೆಕ್ಕ ಮುಕ್ತಾಯ
ಸೆಪ್ಟೆಂಬರ್ 30 ಬ್ಯಾಂಕ್ಗಳ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಪ್ರಮುಖ ದಿನವಾಗಿರುವುದರಿಂದ, ಅದೇ ಸಮಯದಲ್ಲಿ ಮೂರು ದಿನಗಳ ಮುಷ್ಕರ ನಡೆಯುತ್ತಿರುವುದು ಬ್ಯಾಂಕಿಂಗ್ ವಹಿವಾಟು ಮತ್ತು ಲೆಕ್ಕಪರಿಶೋಧನಾ ಪ್ರಕ್ರಿಯೆಗಳ ಮೇಲೆ ಒತ್ತಡ ಉಂಟುಮಾಡುವ ಸಾಧ್ಯತೆಯಿದೆ.
ಸೆ.27ರಂದು ಭಾನುವಾರವೂ ಬ್ಯಾಂಕ್ಗಳು ತೆರೆಯಲಿವೆ
ಸಾಮಾನ್ಯವಾಗಿ ಭಾನುವಾರ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ಆದರೆ ಸತತ ಮೂರು ದಿನಗಳ ಮುಷ್ಕರದಿಂದ ಗ್ರಾಹಕರಿಗೆ ಉಂಟಾಗಬಹುದಾದ ತೊಂದರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸೆಪ್ಟೆಂಬರ್ 27ರಂದು ಬ್ಯಾಂಕ್ ಶಾಖೆಗಳನ್ನು ತೆರೆಯಲು ಸೂಚಿಸಲಾಗಿದೆ.
ಹೀಗಾಗಿ ನಗದು ವಹಿವಾಟು, ಚೆಕ್ಗಳಿಗೆ ಸಂಬಂಧಿಸಿದ ಕೆಲಸ ಅಥವಾ ಇತರ ಶಾಖಾ ಆಧಾರಿತ ಸೇವೆ ಅಗತ್ಯವಿರುವ ಗ್ರಾಹಕರು ಸಾಧ್ಯವಾದಷ್ಟು ಮುಂಚಿತವಾಗಿ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಒಳಿತು.
ಸರ್ಕಾರದ ಮನವಿ ಏನು?
ಮುಷ್ಕರ ಕೈಬಿಟ್ಟು ಮಾತುಕತೆ ಮುಂದುವರಿಸುವಂತೆ ಸರ್ಕಾರ ಬ್ಯಾಂಕ್ ನೌಕರರ ಸಂಘಟನೆಗಳಿಗೆ ಮನವಿ ಮಾಡಿದೆ. ಎಟಿಎಂಗಳಲ್ಲಿ ಸಾಕಷ್ಟು ನಗದು ಲಭ್ಯವಾಗುವಂತೆ ಬ್ಯಾಂಕ್ಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಮಾತುಕತೆ ವೇಳೆ PLI ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯುವ ಕುರಿತು ಒಪ್ಪಂದವಾಗಿದ್ದರೂ, ಐದು ದಿನಗಳ ಕೆಲಸದ ಬೇಡಿಕೆ ಇನ್ನೂ ಪರಿಶೀಲನೆಯಲ್ಲಿದೆ ಎಂದು ಸರ್ಕಾರದ ಪರವಾಗಿ ತಿಳಿಸಲಾಗಿದೆ.
ಬೇಡಿಕೆಗಳ ಕುರಿತು ಸೆಪ್ಟೆಂಬರ್ 28ರೊಳಗೆ ಪರಿಹಾರ ಸಿಗದಿದ್ದರೆ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆಯನ್ನು ಬ್ಯಾಂಕ್ ಯೂನಿಯನ್ಗಳು ನೀಡಿವೆ.

ವೇತನ, ಪಿಂಚಣಿ ಮುಂಚಿತ ಜಮೆ
ತಿಂಗಳಾಂತ್ಯದ ಮುಷ್ಕರದಿಂದ ವೇತನ ಮತ್ತು ಪಿಂಚಣಿ ಪಾವತಿಯಲ್ಲಿ ವ್ಯತ್ಯಯ ಉಂಟಾಗದಂತೆ ಕೇಂದ್ರ ಸರ್ಕಾರದ ನೌಕರರು, ರಕ್ಷಣಾ ಇಲಾಖೆ, ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಪಿಂಚಣಿದಾರರಿಗೆ ಸೆಪ್ಟೆಂಬರ್ ತಿಂಗಳ ವೇತನ ಮತ್ತು ಪಿಂಚಣಿಯನ್ನು ಸೆಪ್ಟೆಂಬರ್ 25ರಂದೇ ಮುಂಚಿತವಾಗಿ ಜಮೆ ಮಾಡಲು ಹಣಕಾಸು ಸಚಿವಾಲಯ ಕ್ರಮ ಕೈಗೊಂಡಿದೆ.
ಗ್ರಾಹಕರು ಗಮನಿಸಬೇಕಾದದ್ದು
ಮೂರು ದಿನಗಳ ಮುಷ್ಕರದ ಸಂದರ್ಭದಲ್ಲಿ ಶಾಖೆಗೆ ತೆರಳಿ ಮಾಡಿಸಬೇಕಿರುವ ಕೆಲಸಗಳಿದ್ದರೆ ಅವುಗಳನ್ನು ಸೆಪ್ಟೆಂಬರ್ 27ರಂದೇ ಪೂರ್ಣಗೊಳಿಸಿಕೊಳ್ಳುವುದು ಸುರಕ್ಷಿತ. ತುರ್ತು ಹಣ ವರ್ಗಾವಣೆ ಮತ್ತು ಡಿಜಿಟಲ್ ಪಾವತಿಗಳಿಗೆ UPI, ಮೊಬೈಲ್ ಬ್ಯಾಂಕಿಂಗ್ ಹಾಗೂ ನೆಟ್ ಬ್ಯಾಂಕಿಂಗ್ ಬಳಸಬಹುದು. ಎಟಿಎಂ ಮೂಲಕ ನಗದು ಪಡೆಯಬೇಕಿರುವವರು ಮುಷ್ಕರಕ್ಕೂ ಮುನ್ನವೇ ಅಗತ್ಯ ಹಣವನ್ನು ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ.
MUST WATCH : ಮತದಾರರ ಪಟ್ಟಿಯಲ್ಲಿ ಮಹಾ ವಿವಾದ – SIR ವಿರುದ್ದ ರಾಜಕೀಯ ಕದನ ಆರಂಭ




