Shivagange Hills ಗೆ ಟ್ರಕ್ಕಿಂಗ್ ಬಂದು ನಾಪತ್ತೆಯಾಗಿರುವ ಅದ್ವೈತ್ ಉಪಾಧ್ಯಾಯ Suicide ಮಾಡಿಕೊಂಡಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನ ಕಾಡುಗೋಡಿ ನಿವಾಸಿ, ಮಧ್ಯಪ್ರದೇಶದ ಇಂದೋರ್ ಮೂಲದ ಟೆಕ್ಕಿ ಅದ್ವೈತ್ ಉಪಾಧ್ಯಾಯ ಅವರು ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿ ನಾಪತ್ತೆಯಾಗಿರುವ ಪ್ರಕರಣದಲ್ಲಿ ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಅದ್ವೈತ್ ಆತ್ಮಹತ್ಯೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದರೇ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದ್ದು, ಅವರಿಗಾಗಿ ಮೂರನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಲ್ಯಾಪ್ಟಾಪ್ನಲ್ಲಿ ಶಾಂತಲಾ ಡ್ರಾಪ್ ಪಾಯಿಂಟ್ ಸರ್ಚ್
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕಾಡುಗೋಡಿಯಲ್ಲಿರುವ ಅದ್ವೈತ್ ಅವರ ಮನೆಯನ್ನು ಪರಿಶೀಲಿಸಿದಾಗ ಲ್ಯಾಪ್ಟಾಪ್ ಪತ್ತೆಯಾಗಿದೆ. ಲ್ಯಾಪ್ಟಾಪ್ ತಪಾಸಣೆ ನಡೆಸಿದ ವೇಳೆ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಅದ್ವೈತ್ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಶಿವಗಂಗೆಯ ಶಾಂತಲಾ ಡ್ರಾಪ್ನಿಂದ(Shantala Drop) ಬಿದ್ದರೆ ಎಷ್ಟೊತ್ತಿಗೆ ಸಾಯಬಹುದು ಎಂದು ಹುಡುಕಾಟ ನಡೆಸಿದ್ದರು.
ಇದಕ್ಕೆ ಎಐ ಬೆಳಿಗ್ಗೆ 7:30 ಕ್ಕೆ ಬಿದ್ದರೆ ಸಾವು ಸಂಭವಿಸಬಹುದು ಎಂದು ಉತ್ತರ ನೀಡಿತ್ತು. ಈ ಕಾರಣಕ್ಕೆ ಆ.4 ರಂದೇ ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಬಳಿಗೆ ಅದ್ವೈತ್ ಬಂದಿರುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇದನ್ನು ಓದಿ : ಶಿವಗಂಗೆ ಬೆಟ್ಟಕ್ಕೆ ಟ್ರೇಕ್ಕಿಂಗ್ ಗೆ ಎಂದು ತೆರಳಿದ ಯುವಕ ನಾಪತ್ತೆ!

ಮೊಬೈಲ್ ಸಂಪರ್ಕಕ್ಕೆ ಸಿಗದೆ ನಾಪತ್ತೆ!
ಪೂರ್ವನಿಯೋಜಿತ ಪ್ಲಾನ್ ಪ್ರಕಾರವೇ ಆ.7 ಶುಕ್ರವಾರ ಬೆಳಿಗ್ಗೆ ಶಿವಗಂಗೆಗೆ ಟ್ರಕ್ಕಿಂಗ್ ತೆರಳಿದ್ದ ಅದ್ವೈತ್, ಬೆಟ್ಟ ಹತ್ತುತ್ತಿದ್ದಂತೆ ತಮ್ಮ ನಿಶ್ಚಿತಾರ್ಥವಾಗಿದ್ದ ಪ್ರಾಪ್ತಿ ಚೌಹಾಣ್ ಅವರಿಗೆ ಕೊನೆಯದಾಗಿ ಫೋಟೋವೊಂದನ್ನು ಕಳುಹಿಸಿದ್ದರು. ಅದಾದ ಬಳಿಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಬೆಟ್ಟದ ತುತ್ತತುದಿಯಲ್ಲಿ ಇತರ ಚಾರಣಿಗರು ತೆಗೆದ ಫೋಟೋಗಳಲ್ಲೂ ಅದ್ವೈತ್ ಕಾಣಿಸಿಕೊಂಡಿರುವುದು ಪತ್ತೆಯಾಗಿದೆ.

ಮೂರನೇ ದಿನವೂ ಮುಂದುವರಿದ ಶೋಧ
ನೆಲಮಂಗಲ ಟೌನ್ ಸಿಪಿಐ ಭರತ್ ಗೌಡ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಎಸ್ಡಿಆರ್ಎಫ್ ತಂಡ ಹಾಗೂ ನುರಿತ ಚಾರಣಿಗರು ಮೂರನೇ ದಿನವೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬೆಟ್ಟದ ಕಡಿದಾದ ಪ್ರದೇಶಗಳು, ಪ್ರಪಾತಗಳು ಹಾಗೂ ತಲುಪಲು ಕಷ್ಟಕರವಾದ ಸ್ಥಳಗಳಲ್ಲಿ ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳ ಮೂಲಕ ಶೋಧ ನಡೆಸಲಾಗುತ್ತಿದೆ. ಶಾಂತಲಾ ಡ್ರಾಪ್ ಸುತ್ತಮುತ್ತ ಆಳವಾದ ಕಂದಕ ಹಾಗೂ ಕಲ್ಲುಬಂಡೆಗಳಿರುವುದರಿಂದ ಕಾರ್ಯಾಚರಣೆ ಸವಾಲಿನದ್ದಾಗಿದೆ.
ಅದ್ವೈತ್ ಅವರ ಪತ್ತೆಗಾಗಿ ವಿವಿಧ ತಂಡಗಳು ಬೆಟ್ಟದ ಹಲವು ಭಾಗಗಳಲ್ಲಿ ಶೋಧ ನಡೆಸುತ್ತಿದ್ದು, ಅವರ ಮೊಬೈಲ್ ಸೇರಿದಂತೆ ಲಭ್ಯವಿರುವ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೂ ತನಿಖೆ ಮುಂದುವರಿದಿದೆ.

ಶಾಂತಲಾ ಡ್ರಾಪ್
ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4800 ಅಡಿ ಎತ್ತರದಲ್ಲಿರುವ ಬೆಟ್ಟವಾಗಿದ್ದು ಹೊಯ್ಸಳ ರಾಜ ವಿಷ್ಣುವರ್ಧನನ ರಾಣಿ, ನಾಟ್ಯರಾಣಿ ಶಾಂತಲೆ ಇಲ್ಲಿಂದ ಕಾಲುಜಾರಿ ಅಥವಾ ಬಿದ್ದು ಮರಣ ಹೊಂದಿದಳು ಎಂಬ ಐತಿಹಾಸಿಕ ಜನಪದ ನಂಬಿಕೆಯಿಂದ ಈ ಸ್ಥಳಕ್ಕೆ ‘ಶಾಂತಲಾ ಡ್ರಾಪ್’ ಎಂದು ಕರೆಯಲಾಗುತ್ತದೆ.
ಇದನ್ನು ನೋಡಿ : ಇವರಿಗೇನಾದ್ರು ಮಾನಮರ್ಯಾದೆ ಇದ್ಯಾ ಶ್ರೀರಾಮುಲು ಹೇಳಿಕೆಗೆ ಖಂಡ್ರೆ ತಿರುಗೇಟು




