ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ತೆರಳಿದ್ದ ಉದ್ಯಮಿ ಮಗ ನಾಪತ್ತೆ: ಡ್ರೋನ್ ಮೂಲಕ ಶೋಧ!

ರಾಜಧಾನಿ ಬೆಂಗಳೂರಿನ ವೈಟ್ಫೀಲ್ಡ್ ಮೂಲದ 31 ವರ್ಷದ ಅದ್ವೈತ ಉಪಾಧ್ಯಾಯ ಎಂಬ ಯುವಕ ನೆಲಮಂಗಲ ತಾಲೂಕಿನ ಐತಿಹಾಸಿಕ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ಗೆ ತೆರಳಿ ದಿಢೀರ್ ನಾಪತ್ತೆಯಾಗಿದ್ದಾನೆ.
ಸಾರ್ವಜನಿಕರಲ್ಲಿ ಭಾರೀ ಆತಂಕ
ಐದು ದಿನಗಳ ಹಿಂದೆ ವೈಟ್ಫೀಲ್ಡ್ನಲ್ಲಿ ಬೈಕ್ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ ಈತ, ನಿನ್ನೆ ಬೆಳಿಗ್ಗೆ ಶಿವಗಂಗೆ ಬೆಟ್ಟದ ಬಳಿ ಬೈಕ್ ಪಾರ್ಕ್ ಮಾಡಿ ಬೆಟ್ಟ ಹತ್ತಲು ಪ್ರಾರಂಭಿಸಿದ್ದಾನೆ. ಆದರೆ, ಬೆಟ್ಟಕ್ಕೆ ತೆರಳಿದ ನಂತರ ಯುವಕ ಮರಳಿ ಬಾರದೆ ನಾಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಹಾಗೂ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಇದನ್ನು ಓದಿ : ನಿಗೂಢ ನಾಪತ್ತೆ: 100ಕ್ಕೂ ಹೆಚ್ಚು ನಗರಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ತನಿಷ್ಕಾ-ತೇಜಸ್ವಿನಿ

ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ
ಅದ್ವೈತ ಶಿವಗಂಗೆ ಬೆಟ್ಟ ಹತ್ತುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ, ಸದ್ಯ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಘಟನೆ ಕುರಿತು ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಯುವಕನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಡ್ರೋನ್ ಮೂಲಕ ಶೋಧ
ನಾಪತ್ತೆಯಾಗಿರುವ ಅದ್ವೈತ ಉಪಾಧ್ಯಾಯ ಅವರಿಗಾಗಿ ನೆಲಮಂಗಲ ಹಾಗೂ ದಾಬಸ್ಪೇಟೆ ಠಾಣೆ ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಿವಗಂಗೆ ಬೆಟ್ಟದ ಕಡಿದಾದ ಪ್ರದೇಶಗಳು ಹಾಗೂ ದಟ್ಟ ಅರಣ್ಯದಲ್ಲಿ ಪೊಲೀಸರು ಡ್ರೋನ್ ಕ್ಯಾಮೆರಾಗಳ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ.

ಯುವಕ ಕಾಲು ಜಾರಿ ಬಿದ್ದಿದ್ದಾನೆಯೇ ಅಥವಾ ಬೇರೆ ಎಲ್ಲಾದರೂ ಸಿಲುಕಿಕೊಂಡಿದ್ದಾನೆಯೇ ಎಂಬ ಕೋನದಲ್ಲಿ ಶೋಧ ಕಾರ್ಯ ಭರದಿಂದ ಸಾಗಿದೆ.
ಇದನ್ನು ನೋಡಿ : ಕಪ್ಪಾದ ಐತಿಹಾಸಿಕ ಹಳ್ಳದ ನೀರು – ಕಾರಂಜಾ ಜಲಾಶಯಕ್ಕೂ ಕೆಮಿಕಲ್ ಆತಂಕ




