ರನ್ಯಾ ರಾವ್ ಬಂಧನದ ಸಂದರ್ಭದ CCTV ದೃಶ್ಯ ಒದಗಿಸಲು ಸಿದ್ಧ: ಕೇಂದ್ರ ಸರ್ಕಾರ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಸಂಬಂಧಿಸಿದಂತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ CCTV ದೃಶ್ಯಾವಳಿ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.
ಸಿಸಿಟಿವಿ ದೃಶ್ಯ ನೀಡಲು ಹೈಕೋರ್ಟ್ ಸೂಚನೆ
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ರನ್ಯಾ ರಾವ್ ಪರ ವಕೀಲ ವೈ.ಎಲ್. ಮಹೇಶ್ ವಾದ ಮಂಡಿಸಿ, 2025ರ ಜುಲೈ 15ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸಿಐಎಸ್ಎಫ್ ಕಮಾಂಡೆಂಟ್ ಸಮರ್ಪಕವಾಗಿ ಪಾಲಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಮಾರ್ಚ್ 3ರಂದು ವಿಮಾನ ನಿಲ್ದಾಣದಲ್ಲಿ ದಾಖಲಾಗಿರುವ ಸ್ಪಷ್ಟ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಲು ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು.
ಇದನ್ನು ಓದಿ : DRI ಬಳಿಕ ನಟಿ ರನ್ಯಾರಾವ್ಗೆ ಎದುರಾಯ್ತು ED ಸಂಕಷ್ಟ..!

ಅರ್ಜಿ ಮುಕ್ತಾಯ
ಸಿಐಎಸ್ಎಫ್ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿ, ಹೈಕೋರ್ಟ್ ಆದೇಶವನ್ನು ಸಿಐಎಸ್ಎಫ್ ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದರು ಎಂದು ತಿಳಿಸಿದರು. ಅರ್ಜಿದಾರರು ಎರಡು ದಿನಗಳ ಬಳಿಕ ಅಧಿಕಾರಿಗಳನ್ನು ಸಂಪರ್ಕಿಸಿದರೆ, 2025ರ ಮಾರ್ಚ್ 3ರ ಸಂಜೆ 4.30ರಿಂದ ಮಾರ್ಚ್ 4ರ ಬೆಳಗ್ಗೆ 11 ಗಂಟೆಯವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
ಸಿಐಎಸ್ಎಫ್ ಪರ ವಕೀಲರ ಹೇಳಿಕೆಯನ್ನು ದಾಖಲಿಸಿಕೊಂಡ ಹೈಕೋರ್ಟ್, ಅಗತ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಅರ್ಜಿದಾರರಿಗೆ ಒದಗಿಸುವಂತೆ ಸೂಚಿಸಿ ಅರ್ಜಿಯನ್ನು ಮುಕ್ತಾಯಗೊಳಿಸಿತು.

ಇದನ್ನು ನೋಡಿ : ತುಮಕೂರಿನಲ್ಲಿ ಚಾಕು ಇರಿದು ಬರ್ಬರ ಹ* – ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅಂದರ್




