
ಕರ್ನಾಟಕದಲ್ಲಿ ಮಳೆ ಅಬ್ಬರ ತಗ್ಗಲಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಇಳಿಕೆ. ಆಗಸ್ಟ್ 31ರವರೆಗೆ ಅಲ್ಲಲ್ಲಿ ಸಣ್ಣ ಮಳೆ ಸಾಧ್ಯತೆ.
ಕರ್ನಾಟಕದಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯ ಅಬ್ಬರಕ್ಕೆ ಇದೀಗ ಬ್ರೇಕ್ ಬೀಳುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಇಂದಿನಿಂದ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಆಗಸ್ಟ್ 31ರವರೆಗೆ ಹೇಗಿರುತ್ತೆ ಹವಾಮಾನ?
ಕರಾವಳಿ ಜಿಲ್ಲೆಗಳಲ್ಲಿ ಸತತವಾಗಿ ಸುರಿಯುತ್ತಿದ್ದ ಭಾರಿ ಮಳೆಯಿಂದ ಜನತೆಗೆ ಕೊಂಚ ಬಿಡುವು ಸಿಗುವ ಸಾಧ್ಯತೆಯಿದೆ.
ಆದಾಗ್ಯೂ, ಆಗಸ್ಟ್ 31ರವರೆಗೆ ದಿನದ ಅವಧಿಯಲ್ಲಿ ಅಲ್ಲಲ್ಲಿ ಒಂದೆರಡು ಬಾರಿ ಸಣ್ಣ ಪ್ರಮಾಣದ ಮಳೆ ಮುಂದುವರಿಯಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಯಾವ್ಯಾವ ಜಿಲ್ಲೆಗಳಲ್ಲಿ ಮಳೆ?
ಮಲೆನಾಡು ಭಾಗದಲ್ಲೂ ಮಳೆಯ ಅಬ್ಬರ ತಗ್ಗುವ ಮುನ್ಸೂಚನೆ ಇದೆ. ಮೋಡಗಳ ಚಲನೆ ವಾಯವ್ಯದಿಂದ ಆಗ್ನೇಯ ದಿಕ್ಕಿನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಆಯ್ದ ಪ್ರದೇಶಗಳಲ್ಲಿ ಮಾತ್ರ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಕೊಡಗಿನ ಕೆಲವು ಪ್ರದೇಶಗಳಲ್ಲಿ ಇಂದೂ ಮಳೆಯ ಪ್ರಭಾವ ಮುಂದುವರಿಯಬಹುದು. ಆದರೆ ಜಿಲ್ಲೆಯ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ.
ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಬಹುದು. ಒಟ್ಟಾರೆ ಮಲೆನಾಡು ಜಿಲ್ಲೆಗಳಲ್ಲೂ ಇಂದಿನಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
READ THIS : ರಾಜ್ಯದಲ್ಲಿ ಕೈಕೊಟ್ಟ ಮುಂಗಾರು – ಹಿಂಗಾರು ಮೇಲೆ ಜನರ ನಂಬಿಕೆ

ವಾರಾಂತ್ಯದವರೆಗೆ ಹೇಗಿರಲಿದೆ ಹವಾಮಾನ?
ಕಳೆದ ಕೆಲವು ದಿನಗಳಿಂದ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಬೇಸತ್ತಿದ್ದವರಿಗೆ ಇದೀಗ ಕೊಂಚ ನೆಮ್ಮದಿ ಸಿಗುವ ಸಾಧ್ಯತೆಯಿದೆ.
ಆಗಸ್ಟ್ ಅಂತ್ಯದವರೆಗೆ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಮಳೆಯ ಮುನ್ಸೂಚನೆ ಇಲ್ಲದಿರುವುದರಿಂದ, ಮಳೆ ಪ್ರಮಾಣ ಕಡಿಮೆಯಾಗಿ ಹಲವೆಡೆ ಬಿಸಿಲು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಹಾಗೂ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗಲಿದೆ.

ಉತ್ತರ ಒಳನಾಡಿನಲ್ಲೂ ಮಿಶ್ರ ವಾತಾವರಣ
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಹುತೇಕ ಕಡೆ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಆದರೆ ಗದಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಗದಗ ಗಡಿಭಾಗದಲ್ಲೂ ಉತ್ತಮ ಮಳೆಯಾಗಬಹುದು.
ಬಳ್ಳಾರಿ, ಕೊಪ್ಪಳ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳ ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನುಳಿದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಮುಂದುವರಿಯಬಹುದು.

ದಕ್ಷಿಣ ಒಳನಾಡಿನಲ್ಲಿ ಬಿಸಿಲು
ದಕ್ಷಿಣ ಒಳನಾಡಿನ ದಾವಣಗೆರೆ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಕೆಲವೆಡೆ ಒಂದೆರಡು ಕಡೆ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ.
ಉಳಿದ ಜಿಲ್ಲೆಗಳಲ್ಲಿ ಮುಖ್ಯವಾಗಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಕಂಡುಬರಬಹುದು.
MUST WATCH : ಬೆಂಗಳೂರಿಗೆ ಕಾವೇರಿ 6ನೇ ಹಂತದ ಕುಡಿಯುವ ನೀರು – ಯೋಜನೆ ಕೈಬಿಡಲು ಮಂಡ್ಯ ರೈತರ ಪಟ್ಟು




