
ನಟ ದರ್ಶನ್ ಜೊತೆ ಗೆಳೆತನ ಶುರುವಾಗಿದ್ದು ಹೇಗೆ? ಕೋರ್ಟ್ ಮುಂದೆ ಎಲ್ಲವನ್ನು ತಿಳಿಸಿದ ʻಮಾಫಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದ ಮುಂದೆ ಹಾಜರಾದ ಪ್ರದೋಷ್, ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ಮಾಹಿತಿಯನ್ನು ಸತತ ಮೂರು ಗಂಟೆಗಳ ಕಾಲ ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ.
ದರ್ಶನ್ ಪರಿಚಯದ ಬಗ್ಗೆ ಪ್ರದೋಷ್ ಹೇಳಿಕೆ
2003ರಲ್ಲಿ ಕ್ರಿಕೆಟ್ ಆಡಲು ತೆರಳುತ್ತಿದ್ದ ಸಂದರ್ಭದಲ್ಲಿ ನಟ ದರ್ಶನ್ ಪರಿಚಯವಾಗಿತ್ತು. ನಂತರ ಇಬ್ಬರೂ ಆತ್ಮೀಯ ಸ್ನೇಹಿತರಾದೆವು ಎಂದು ಪ್ರದೋಷ್ ಹೇಳಿಕೆ ನೀಡಿದ್ದಾರೆ. ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಈ ವೇಳೆ ದರ್ಶನ್ ಅವರನ್ನು ಭೇಟಿಯಾಗುತ್ತಿದ್ದೆ. ಕಾರ್ಯಕ್ರಮಗಳಿದ್ದಾಗ ಅವರ ಮನೆಗೂ ತೆರಳುತ್ತಿದ್ದೆ ಎಂದು ಪ್ರದೋಷ್ ತಿಳಿಸಿದ್ದಾರೆ.
2024ರ ಜೂನ್ 8ರಂದು ಶನಿವಾರ ರಜೆ ಇದ್ದ ಹಿನ್ನೆಲೆಯಲ್ಲಿ ಗಿರಿನಗರದ ಮನೆಯಿಂದ ಬೈಕ್ನಲ್ಲಿ ದರ್ಶನ್ ಅವರ ಐಡಿಯಲ್ ಹೋಮ್ಸ್ ನಿವಾಸಕ್ಕೆ ತೆರಳಿದ್ದೆ. ಆಗ ದರ್ಶನ್ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಅವರ ತರಬೇತುದಾರ ಹೇಮಂತ್ ಕೂಡ ಅಲ್ಲಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
READ THIS : ಆರೋಪಿ ದರ್ಶನ್ಗೆ ಶುರುವಾಯ್ತು ಮಾಫಿ ಸಾಕ್ಷಿ ಸಂಕಷ್ಟ!

ದರ್ಶನ್ ಒತ್ತಾಯದಿಂದ ಪಾರ್ಟಿಗೆ ತೆರಳಿದ್ದೆ
ದರ್ಶನ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಬಳಿಕ ಅವರ ಶೂಟಿಂಗ್ ಕುರಿತು ಸುಮಾರು 15 ನಿಮಿಷ ಮಾತನಾಡಿದ್ದೆ. ಮಗಳನ್ನು ಸ್ವಿಮ್ಮಿಂಗ್ಗೆ ಕರೆದುಕೊಂಡು ಹೋಗಬೇಕಿದ್ದ ಕಾರಣ ಮನೆಗೆ ತೆರಳುವುದಾಗಿ ತಿಳಿಸಿದ್ದೆ ಎಂದು ಪ್ರದೋಷ್ ಹೇಳಿದ್ದಾರೆ.
ಆದರೆ ಮಧ್ಯಾಹ್ನ ವಿನಯ್ ಅವರ ಸ್ಟೋನಿ ಬ್ರೂಕ್ನಲ್ಲಿ ಸಣ್ಣ ಪಾರ್ಟಿ ಆಯೋಜಿಸಲಾಗಿದೆ, ಬರುವಂತೆ ದರ್ಶನ್ ಒತ್ತಾಯಿಸಿದ್ದರು. ತಾನು ಸುಸ್ತಾಗಿರುವುದರಿಂದ ಬರಲು ಸಾಧ್ಯವಿಲ್ಲ ಎಂದು ಹೇಳಿದರೂ ದರ್ಶನ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪಾರ್ಟಿಗೆ ತೆರಳಲು ಒಪ್ಪಿಕೊಂಡಿದ್ದೆ ಎಂದು ಹೇಳಿಕೆ ನೀಡಿದ್ದಾರೆ.
ನಂತರ ಮನೆಗೆ ತೆರಳಿ ಬಟ್ಟೆ ಬದಲಿಸಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ಮಧ್ಯಾಹ್ನ ಸುಮಾರು 12.30ಕ್ಕೆ ದರ್ಶನ್ ಅವರ ಮನೆಗೆ ಬಂದೆ. ಅಲ್ಲಿಂದ ದರ್ಶನ್ ಮತ್ತು ನಾಗರಾಜ್ ಅವರೊಂದಿಗೆ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ಬಳಿಕ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ಗೆ ತೆರಳಿದ್ದೆವು ಎಂದು ಪ್ರದೋಷ್ ತಿಳಿಸಿದ್ದಾರೆ.

ಮಂಗಳವಾರವೂ ಹೇಳಿಕೆ ದಾಖಲು
ಪ್ರದೋಷ್ ನೀಡಿದ ಸುದೀರ್ಘ ಹೇಳಿಕೆಯನ್ನು ಪ್ರಿಂಟ್ಔಟ್ ತೆಗೆದು, ಅದಕ್ಕೆ ಸಹಿ ಪಡೆಯುವ ಪ್ರಕ್ರಿಯೆ ಬಾಕಿ ಇದ್ದ ಹಿನ್ನೆಲೆಯಲ್ಲಿ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ಮನವಿಯ ಮೇರೆಗೆ ವಿಚಾರಣೆಯನ್ನು ಇಂದು, ಸೆಪ್ಟೆಂಬರ್ 29ಕ್ಕೆ ಮುಂದೂಡಲಾಗಿತ್ತು. ಇಂದು ಮತ್ತೆ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯಲಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಪವಿತ್ರಾ ಗೌಡ
ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಪ್ರಕರಣದ ಮತ್ತೊಬ್ಬ ಆರೋಪಿ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಅವರು ಕಣ್ಣೀರು ಹಾಕುತ್ತಿದ್ದರು ಎನ್ನಲಾಗಿದೆ.
ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಕೂಡ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಮೌನವಾಗಿದ್ದರು. ಪ್ರದೋಷ್ ನೀಡುತ್ತಿದ್ದ ಹೇಳಿಕೆಯನ್ನು ಆಲಿಸಿದ ಬಳಿಕ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು ಎನ್ನಲಾಗಿದೆ.

MUST WATCH : AICC ಕಚೇರಿಯತ್ತ SIDDARAMAIAH – ದೆಹಲಿಯಲ್ಲಿ HIGH-VOLTAGE ಸಭೆ




