
WPL 2027 : ಮುಂಬೈ ಇಂಡಿಯನ್ಸ್ ತಂಡಕ್ಕೆ ನೂತನ ಹೆಡ್ ಕೋಚ್ ನೇಮಕ!
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (WPL) ಎರಡು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕವಾಗಿದೆ. 2027ರ WPL ಸೀಸನ್ಗೂ ಮುನ್ನ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ ಎಂದು ಫ್ರಾಂಚೈಸಿ ಗುರುವಾರ ಪ್ರಕಟಿಸಿದೆ.
ಈ ಮೂಲಕ ಕಳೆದ ಸೀಸನ್ನಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ಲಿಸಾ ಕೀಟ್ಲಿ ಅವರ ಸ್ಥಾನವನ್ನು ವಿಲಿಯಮ್ಸ್ ತುಂಬಲಿದ್ದಾರೆ.

ಎರಡು ಬಾರಿ ಚಾಂಪಿಯನ್ ಮುಂಬೈಗೆ ಹೊಸ ಸಾರಥಿ
WPL ಇದುವರೆಗೆ ನಾಲ್ಕು ಆವೃತ್ತಿಗಳನ್ನು ಕಂಡಿದ್ದು, ಮುಂಬೈ ಇಂಡಿಯನ್ಸ್ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. 2023ರಲ್ಲಿ ನಡೆದ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿದ್ದ ಮುಂಬೈ, 2025ರಲ್ಲೂ ಪ್ರಶಸ್ತಿ ಗೆದ್ದು ತನ್ನ ಬಲಿಷ್ಠ ಪ್ರದರ್ಶನ ಮುಂದುವರಿಸಿತ್ತು. ಇದೀಗ 2027ರ ಸೀಸನ್ಗಾಗಿ ತಂಡ ಹೊಸ ಕೋಚ್ ಅಡಿಯಲ್ಲಿ ಸಿದ್ಧತೆ ಆರಂಭಿಸಲಿದೆ. ಮೊದಲ ಆವೃತ್ತಿಯಿಂದಲೂ ತಂಡದ ನಾಯಕಿಯಾಗಿರುವ ಹರ್ಮನ್ಪ್ರೀತ್ ಕೌರ್ ಅವರೊಂದಿಗೆ ಲ್ಯೂಕ್ ವಿಲಿಯಮ್ಸ್ ಕೆಲಸ ಮಾಡಲಿದ್ದಾರೆ.
READ THIS : 5 ವರ್ಷಗಳ ಬಳಿಕ ಕೃನಾಲ್ ಪಾಂಡ್ಯಗೆ ಟೀಂ ಇಂಡಿಯಾದಲ್ಲಿ ಸ್ಥಾನ!

ಒಂದು ಸೀಸನ್ಗಷ್ಟೇ ಸೀಮಿತವಾದ ಕೀಟ್ಲಿ ಅವಧಿ
ಲಿಸಾ ಕೀಟ್ಲಿ ಒಂದು ಆವೃತ್ತಿಗೆ ಮಾತ್ರ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಕಳೆದ ಸೀಸನ್ನಲ್ಲಿ ಐದು ತಂಡಗಳ ಪೈಪೋಟಿಯಲ್ಲಿ ಮುಂಬೈ ನಾಲ್ಕನೇ ಸ್ಥಾನ ಪಡೆದಿತ್ತು. ತಂಡ ಆಡಿದ ಎಂಟು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಐದು ಸೋಲು ದಾಖಲಿಸಿತ್ತು. ಈ ಪ್ರದರ್ಶನದ ಬಳಿಕ ಫ್ರಾಂಚೈಸಿ ಕೋಚಿಂಗ್ ವಿಭಾಗದಲ್ಲಿ ಬದಲಾವಣೆಗೆ ಮುಂದಾಗಿದೆ.
ವಿಲಿಯಮ್ಸ್ ಮೇಲೆ ಮುಂಬೈ ನಿರೀಕ್ಷೆ
ಮುಂಬೈ ಇಂಡಿಯನ್ಸ್ ಸಹ-ಮಾಲೀಕಿ ನೀತಾ ಅಂಬಾನಿ ಅವರು ಲಿಸಾ ಕೀಟ್ಲಿ ಅವರ ಸೇವೆಗಳಿಗೆ ಧನ್ಯವಾದ ಅರ್ಪಿಸಿದ್ದು, ಹೊಸ ಮುಖ್ಯ ಕೋಚ್ ಲ್ಯೂಕ್ ವಿಲಿಯಮ್ಸ್ ಅವರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ.

ಮಹಿಳಾ ಕ್ರಿಕೆಟ್ನ ಸೂಕ್ಷ್ಮತೆಗಳ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿರುವ ವಿಲಿಯಮ್ಸ್, ಆಟಗಾರ್ತಿಯರ ಅಭಿವೃದ್ಧಿಗೆ ಒತ್ತು ನೀಡುವ ಅನುಭವವನ್ನೂ ಹೊಂದಿದ್ದಾರೆ ಎಂದು ನೀತಾ ಅಂಬಾನಿ ಹೇಳಿದ್ದಾರೆ. ಅವರ ಅನುಭವವು ತಂಡದ ಮುಂದಿನ ಪ್ರಯಾಣಕ್ಕೆ ನೆರವಾಗಲಿದೆ ಎಂಬ ವಿಶ್ವಾಸವನ್ನು ಫ್ರಾಂಚೈಸಿ ವ್ಯಕ್ತಪಡಿಸಿದೆ.
MUST WATCH : ಗವಿಸಿದ್ದೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆ – ಐತಿಹಾಸಿಕ ಗವಿಮಠಕ್ಕೆ ದೊರೆತ ದಸರಾ ಗೌರವ




