
RENUKASWAMY ಕೇಸ್ನಲ್ಲಿ ಬಿಗ್ ಟ್ವಿಸ್ಟ್ – ಪೊಲೀಸರ ವಿರುದ್ಧವೇ ಇಲಾಖಾ ತನಿಖೆಗೆ ಸೂಚನೆ
ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿರುವ ವರದಿಗಳ ಬೆನ್ನಲ್ಲೇ, ತನಿಖೆಯಲ್ಲಿ ಲೋಪಗಳಾಗಿವೆ ಎಂಬ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಎಸಿಪಿ ಚಂದನ್ ಹಾಗೂ ಪಿಎಸ್ಐ ವಿನಯ್ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಲಾಗಿದೆ.
ಪಿಎಸ್ಐ ವಿನಯ್ ಪಾತ್ರದ ತನಿಖೆಗೆ ಆಗ್ರಹ
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಹಾಗೂ ಪಿಎಸ್ಐ ವಿನಯ್ ಅವರನ್ನು ಆರೋಪಿಗಳ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆದಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೃತದೇಹ ವಿಲೇವಾರಿ ವಿಚಾರದಲ್ಲೂ ಆರೋಪ
ಅಷ್ಟೇ ಅಲ್ಲ, ರೇಣುಕಾಸ್ವಾಮಿ ಮೃತದೇಹದ ವಿಲೇವಾರಿ ವಿಚಾರದಲ್ಲೂ ಪಿಎಸ್ಐ ವಿನಯ್ ಅವರ ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ. ಅವರ ಸೂಚನೆಯಂತೆ ಆರೋಪಿಗಳು ನಡೆದುಕೊಂಡಿದ್ದರು ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಆರೋಪಗಳು ಇನ್ನೂ ಸಾಬೀತಾಗಿಲ್ಲ.
READ THIS : ರೇಣುಕಾಸ್ವಾಮಿ ಕೇಸ್ – ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್
ಡಿಜಿ ಮತ್ತು ಐಜಿಪಿಗೆ ಸ್ನೇಹಮಯಿ ಕೃಷ್ಣ ದೂರು
ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರು ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರಾದ ಡಾ. ಎಂ. ಸಲೀಂ ಅವರಿಗೆ ದೂರು ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಎಸಿಪಿ ಚಂದನ್ ಹಾಗೂ ಪಿಎಸ್ಐ ವಿನಯ್ ವಿರುದ್ಧ ಇಲಾಖಾ ಮಟ್ಟದ ತನಿಖೆಗೆ ಸೂಚಿಸಲಾಗಿದೆ ಎನ್ನಲಾಗಿದೆ.

ಅಧಿಕಾರಿಗಳ ಪಾತ್ರದ ಬಗ್ಗೆ ಪರಿಶೀಲನೆ ಸಾಧ್ಯತೆ
ಇನ್ನು ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ಇಲಾಖಾ ತನಿಖೆ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರಕರಣದ ತನಿಖೆಯ ವೇಳೆ ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಂಡಿದ್ದಾರೆಯೇ? ದೂರಿನಲ್ಲಿ ಮಾಡಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳಿವೆಯೇ? ಎಂಬ ವಿಚಾರಗಳು ಪರಿಶೀಲನೆಗೆ ಒಳಪಡುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಗಮನ
ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲೇ ಲೋಪಗಳಾಗಿವೆ ಎಂಬ ಆರೋಪ ಇದೀಗ ಚರ್ಚೆಗೆ ಕಾರಣವಾಗಿದೆ.
ಎಸಿಪಿ ಚಂದನ್ ಹಾಗೂ ಪಿಎಸ್ಐ ವಿನಯ್ ವಿರುದ್ಧ ಕೇಳಿಬಂದಿರುವ ಆರೋಪಗಳು ಇಲಾಖಾ ತನಿಖೆಯಲ್ಲಿ ದೃಢಪಟ್ಟ ಬಳಿಕವಷ್ಟೇ ಮುಂದಿನ ಕ್ರಮಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.

MUST WATCH : ಸಿದ್ದರಾಮಯ್ಯ ವಿಚಾರದಲ್ಲಿ ಟ್ರ್ಯಾಪ್ ಆಗಿಲ್ಲ – ಅನಗತ್ಯ ಚರ್ಚೆ ಬೇಡ ಎಂದ ಪೊನ್ನಣ್ಣ




