
ಕೊಪ್ಪಳದಲ್ಲಿ ಭೀಕರ ಕೊಲೆ: 18 ಲಕ್ಷ ರೂ. ಸಾಲ ತೀರಿಸಲು ಪತಿಯನ್ನೇ ಕೊಲ್ಲಿಸಿದ ಪತ್ನಿ!
ಮನೆ ಕಟ್ಟಲು ಮಾಡಿದ ಸಾಲದ ಹೊರೆ.. ಅದರಿಂದ ಹೊರಬರಲು ವಿಮೆ ಹಣದ ಆಸೆ.. ಕೊನೆಗೆ ಪತಿಯ ಕೊಲೆಗೆ ಪತ್ನಿಯೇ ಸಂಚು ರೂಪಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಹೌದು.. 38 ವರ್ಷದ ರಾಘವೇಂದ್ರ ಹನುಮಂತಪ್ಪ ಸಾಳುಂಕೆ ಕೊಲೆಯಾದ ಪತಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಉಮಾ ಸೇರಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮನೆ ನಿರ್ಮಾಣಕ್ಕಾಗಿ ₹18 ಲಕ್ಷ ಸಾಲ ಪಡೆದಿದ್ದ ದಂಪತಿ
ಇನ್ನು ರಾಘವೇಂದ್ರ ಹಾಗೂ ಉಮಾ ದಂಪತಿ ಮನೆ ನಿರ್ಮಾಣಕ್ಕಾಗಿ ವಿವಿಧ ಸ್ತ್ರೀಶಕ್ತಿ ಸಂಘಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸುಮಾರು 18 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗದೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ನಡುವೆ ಪತಿ ಮೃತಪಟ್ಟರೆ ವಿಮೆ ಹಣ ಸಿಗುತ್ತೆ, ಸಾಲವೂ ಮನ್ನಾ ಆಗುತ್ತೆ ಎಂದು ಪತ್ನಿಯೇ ಪತಿ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಹೊಸ ಸ್ಕೂಟಿ ಕೊಡಿಸುವ ಆಮಿಷ
ಪತಿಯನ್ನು ಕೊಲೆ ಮಾಡಲು ಉಮಾ ಮೊದಲೇ ಪ್ರಯತ್ನಿಸಿದ್ದಳು. ಬಳಿಕ ಗಂಗಾವತಿಯಲ್ಲಿದ್ದ ತನ್ನ ಸಂಬಂಧಿ ಶಿವಾಜಿಯನ್ನು ಸಂಪರ್ಕಿಸಿ, ಪತಿಯನ್ನು ಕೊಲೆ ಮಾಡಿದರೆ ಹೊಸ ಸ್ಕೂಟಿ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು ಎನ್ನಲಾಗಿದೆ. ಶಿವಾಜಿ ತನ್ನ ಸ್ನೇಹಿತ ಖಲೀಲ್ನನ್ನೂ ಈ ಕೃತ್ಯಕ್ಕೆ ಸೇರಿಸಿಕೊಂಡಿದ್ದ.
READ THIS : ಹಣಕ್ಕಾಗಿ ಮಹಿಳೆಯ Murder – ಲಾಸ್ಟ್ ಕಾಲ್ನಿಂದ ಸಿಕ್ಕಿಬಿದ್ದ ಆರೋಪಿ!
ಮಕ್ಕಳಿಗೆ ಜೀವ ಬೆದರಿಕೆ
ಇನ್ನು ಅಕ್ಟೋಬರ್ 6ರ ರಾತ್ರಿ ಶಿವಾಜಿ ಹಾಗೂ ಖಲೀಲ್ ಮುಸ್ಟೂರು ಕ್ಯಾಂಪ್ನಲ್ಲಿರುವ ರಾಘವೇಂದ್ರನ ಮನೆಗೆ ಬಂದಿದ್ದರು. ಮಧ್ಯರಾತ್ರಿ ರಾಘವೇಂದ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಲಾಗಿದ್ದು, ಈ ವೇಳೆ ತಂದೆಯ ಚೀರಾಟ ಕೇಳಿ ಎಚ್ಚರಗೊಂಡ ಮಕ್ಕಳಿಗೂ ಜೀವ ಬೆದರಿಕೆ ಹಾಕಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ವರದಿಯಾಗಿದೆ.

MURDER ಮಾಡಿ ಅಪಘಾತದಂತೆ ಬಿಂಬಿಸಲು ಯತ್ನ
ಹಲ್ಲೆಯ ಬಳಿಕವೂ ರಾಘವೇಂದ್ರ ಮೃತಪಟ್ಟಿರಲಿಲ್ಲ ಎನ್ನಲಾಗಿದೆ. ಬಳಿಕ ಆರೋಪಿಗಳು ಆತನನ್ನು ಬೈಕ್ನಲ್ಲಿ ಕೂರಿಸಿಕೊಂಡು ಸುಮಾರು ಐದು ಕಿಲೋಮೀಟರ್ ದೂರದ ಹೆಬ್ಬಾಳ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಅಪಘಾತದಂತೆ ಬಿಂಬಿಸುವ ಉದ್ದೇಶದಿಂದ ಆತನ ಬಾಯಿಗೆ ಕೀಟನಾಶಕ ಸುರಿದು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ಮರುದಿನ ಬೆಳಗ್ಗೆ ಹೊಲಕ್ಕೆ ತೆರಳುತ್ತಿದ್ದ ರೈತರು ರಾಘವೇಂದ್ರ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಬಂದ ಪತ್ನಿ ಉಮಾ, ಅಪಘಾತ ಅಥವಾ ಫಿಟ್ಸ್ನಿಂದ ಘಟನೆ ಸಂಭವಿಸಿರಬಹುದು ಎಂದು ಹೇಳಿದ್ದಳು ಎನ್ನಲಾಗಿದೆ.
ಗಂಗಾವತಿ ಗ್ರಾಮೀಣ ಪೊಲೀಸರಿಂದ ಮೂವರ ಬಂಧನ
ಪ್ರಕರಣದ ತನಿಖೆ ಕೈಗೊಂಡ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು, ಮೃತನ ಪತ್ನಿ ಉಮಾ, ಆಕೆಯ ಸಂಬಂಧಿ ಶಿವಾಜಿ ಹಾಗೂ ಶಿವಾಜಿಯ ಸ್ನೇಹಿತ ಖಲೀಲ್ನನ್ನು ಬಂಧಿಸಿದ್ದಾರೆ. ಇನ್ನು ಕೊಲೆ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

MUST WATCH : KMF ಪಶು ಆಹಾರದಲ್ಲಿ ಎಂ-ಸ್ಯಾಂಡ್ ಮಿಶ್ರಣ – ಶಾಸಕ ಸಮೃದ್ಧಿ ಮಂಜುನಾಥ್ ಆರೋಪ

