13 ದಿನದಲ್ಲಿ 3 ಕೋಟಿ ಸಂಗ್ರಹ – ದಾಖಲೆ ಬರೆದ Chamundeshawari ದೇಗುಲ!

ಶಕ್ತಿದೇವತೆ, ಮೈಸೂರು ದಸರಾ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಆಷಾಢ ಮಾಸದ ಪೂಜಾ ವೈಭವ ಹಾಗೂ ವರ್ಧಂತಿ ಮಹೋತ್ಸವ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ. ಚಾಮುಂಡಿಬೆಟ್ಟಕ್ಕೆ ಈ ಬಾರಿ ಹರಿದುಬಂದ ಭಕ್ತರ ಸಂಖ್ಯೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ದೇವಾಲಯದ ಪ್ರಾಧಿಕಾರ ಹಾಗೂ ಸಾರಿಗೆ ಸಂಸ್ಥೆಯ ಆದಾಯದಲ್ಲೂ ಗಣನೀಯ ಏರಿಕೆಯಾಗಿದೆ.
8.61 ಲಕ್ಷ ಭಕ್ತರು ತಾಯಿ ಚಾಮುಂಡೇಶ್ವರಿಯ ದರ್ಶನ
ಆಷಾಢದ ನಾಲ್ಕು ಶುಕ್ರವಾರಗಳು, ವಾರಾಂತ್ಯದ ಶನಿವಾರ ಮತ್ತು ಭಾನುವಾರಗಳು ಹಾಗೂ ವರ್ಧಂತಿ ಮಹೋತ್ಸವ ಸೇರಿದಂತೆ ಒಟ್ಟು 13 ದಿನಗಳಲ್ಲಿ ಬರೋಬ್ಬರಿ 8.61 ಲಕ್ಷ ಭಕ್ತರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ವಿಶೇಷವಾಗಿ ಆಗಸ್ಟ್ 7ರಿಂದ 9ರವರೆಗೆ ಕೇವಲ ಮೂರು ದಿನಗಳಲ್ಲಿ 2.78 ಲಕ್ಷ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿರುವುದು ಈ ಬಾರಿಯ ವಿಶೇಷವಾಗಿದೆ.
ನಾಲ್ಕು ಶುಕ್ರವಾರಗಳಲ್ಲಿ 3.53 ಲಕ್ಷ ಭಕ್ತರು
ಆಷಾಢದ ನಾಲ್ಕು ಶುಕ್ರವಾರಗಳಲ್ಲಿ ಒಟ್ಟು 3,53,500 ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
- ಜುಲೈ 17: 55,000 ಭಕ್ತರು
- ಜುಲೈ 24: 75,000 ಭಕ್ತರು
- ಜುಲೈ 31: 98,500 ಭಕ್ತರು
- ಆಗಸ್ಟ್ 7: 1.25 ಲಕ್ಷ ಭಕ್ತರು
ಕೊನೆಯ ಆಷಾಢ ಶುಕ್ರವಾರವಾದ ಆಗಸ್ಟ್ 7ರಂದು ಗರಿಷ್ಠ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ.

ಇದರೊಂದಿಗೆ ನಾಲ್ಕು ಶನಿವಾರಗಳಲ್ಲಿ 1,98,000 ಹಾಗೂ ನಾಲ್ಕು ಭಾನುವಾರಗಳಲ್ಲಿ 2,20,500 ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಆಗಸ್ಟ್ 4ರಂದು ನಡೆದ ತಾಯಿ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವದಂದು 89,000 ಭಕ್ತರು ದರ್ಶನ ಪಡೆದಿದ್ದಾರೆ.
ಇದನ್ನು ಓದಿ : ಆಷಾಡ ಶುಕ್ರವಾರ – Lakshmi ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ
ವಿಶೇಷ ದರ್ಶನದಿಂದ 3.08 ಕೋಟಿ ರೂ. ಆದಾಯ
ಭಕ್ತರ ಅನುಕೂಲಕ್ಕಾಗಿ ದೇವಾಲಯದಲ್ಲಿ ಜಾರಿಗೆ ತಂದಿದ್ದ ರೂ.2,000 ಮುಖಬೆಲೆಯ ವಿಶೇಷ ದರ್ಶನ ಟಿಕೆಟ್ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 15,421 ಭಕ್ತರು ವಿಶೇಷ ದರ್ಶನದ ಟಿಕೆಟ್ ಖರೀದಿಸಿದ್ದು, ಇದರಿಂದ ದೇವಾಲಯದ ಪ್ರಾಧಿಕಾರಕ್ಕೆ ರೂ.3,08,42,000 ಆದಾಯ ಸಂಗ್ರಹವಾಗಿದೆ.
ಒಟ್ಟು ಭಕ್ತರ ಪೈಕಿ ಕೇವಲ 1.79ರಷ್ಟು ಮಂದಿ ಮಾತ್ರ ವಿಶೇಷ ದರ್ಶನ ಪಡೆದಿದ್ದು, ಶೇ.98.21ರಷ್ಟು ಭಕ್ತರು ಧರ್ಮದರ್ಶನದ ಸಾಲಿನ ಮೂಲಕ ದೇವಿಯ ದರ್ಶನ ಪಡೆದಿದ್ದಾರೆ.

4,935 ಬಸ್ ಟ್ರಿಪ್ಗಳ ಕಾರ್ಯಾಚರಣೆ
ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಭಕ್ತರ ಸುಗಮ ಸಂಚಾರಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು. ಆಷಾಢ ಮಾಸದ ಅವಧಿಯಲ್ಲಿ ಒಟ್ಟು 4,935 ಬಸ್ ಟ್ರಿಪ್ಗಳು ಕಾರ್ಯಾಚರಣೆ ನಡೆಸಿವೆ.
ಇವುಗಳಲ್ಲಿ:
- 2,522 ಟ್ರಿಪ್ಗಳು ಕರ್ನಾಟಕ ಸಾರಿಗೆ
- 1,811 ಟ್ರಿಪ್ಗಳು ನಗರ ಸಾರಿಗೆ
- 602 ಟ್ರಿಪ್ಗಳು ವೋಲ್ವೋ ಬಸ್ಗಳು
ಜುಲೈ 17ರಂದು ಗರಿಷ್ಠ 470 ಟ್ರಿಪ್ಗಳು ಹಾಗೂ ಆಗಸ್ಟ್ 7ರಂದು 466 ಟ್ರಿಪ್ಗಳು ಕಾರ್ಯಾಚರಣೆ ನಡೆಸಿವೆ. ಭಕ್ತರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದ್ದರೂ, ಒಟ್ಟಾರೆ ಸಾರಿಗೆ ಕಾರ್ಯಾಚರಣೆಯಿಂದ ಸಂಸ್ಥೆಗೆ ರೂ.88.34 ಲಕ್ಷ ಆದಾಯ ಲಭಿಸಿದೆ.

ಇದನ್ನು ನೋಡಿ : ತಿಪಟೂರು ಬಳಿಕ ಶಿರಾ ಜಿಲ್ಲೆ ಕೂಗು – ಷಡಕ್ಷರಿಗೆ ಟಿ.ಬಿ. ಜಯಚಂದ್ರ ಕೌಂಟರ್




