
MYSURU DASARA 2026 : ವೇಳಾಪಟ್ಟಿ ಪ್ರಕಟ – ಅಕ್ಟೋಬರ್ 11ಕ್ಕೆ ಗವಿಸಿದ್ದೇಶ್ವರ ಶ್ರೀಗಳಿಂದ ಉದ್ಘಾಟನೆ, ಅಕ್ಟೋಬರ್ 21ಕ್ಕೆ ಜಂಬೂಸವಾರಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೌಂಟ್ಡೌನ್ ಶುರುವಾಗಿದೆ. ದಸರಾ-2026ರ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕಟವಾಗಿದ್ದು, ಅಕ್ಟೋಬರ್ 11ರಿಂದ 21ರವರೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಕಳೆಗಟ್ಟಲಿದೆ. ಈ ಬಾರಿಯ ದಸರಾ ಉದ್ಘಾಟನೆಯಿಂದ ಜಂಬೂಸವಾರಿವರೆಗೆ ಹಲವು ವಿಶೇಷ ಕಾರ್ಯಕ್ರಮಗಳು ಆಯೋಜನೆಯಾಗಿವೆ.
ದಸರಾ ವೇಳಾಪಟ್ಟಿ ಪ್ರಕಟ
ಅಕ್ಟೋಬರ್ 11ರಂದು ಬೆಳಗ್ಗೆ 11:50ರಿಂದ 12:13ರವರೆಗಿನ ಶುಭ ಧನುರ್ ಲಗ್ನದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಕಾರ್ಯಕ್ರಮಗಳ ಪಟ್ಟಿ ಹೀಗಿದೆ
ಇನ್ನು ಯುವಜನತೆಯ ಪ್ರಮುಖ ಆಕರ್ಷಣೆಯಾಗಿರುವ ಯುವ ದಸರಾ ಅಕ್ಟೋಬರ್ 13ರಿಂದ ಆರಂಭವಾಗಲಿದೆ. ಐದು ದಿನಗಳ ಕಾಲ ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಗೆ ಮಹಿಳಾ ದಸರಾ, ರೈತ ದಸರಾ, ಮಕ್ಕಳ ದಸರಾ, ಯೋಗ ದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿವೆ.
READ THIS : ದಸರಾ ಉದ್ಘಾಟನೆಗೆ ಬರುವುದಿಲ್ಲ ಎಂದ ಗವಿಸಿದ್ದೇಶ್ವರ ಶ್ರೀಗಳು?
ಮೈಸೂರಿನಲ್ಲಿ ಕಂಬಳ
ಈ ಬಾರಿಯ ದಸರಾ ಸಂಭ್ರಮಕ್ಕೆ ಕರಾವಳಿಯ ಜಾನಪದ ಕ್ರೀಡೆ ಕಂಬಳವೂ ವಿಶೇಷ ಆಕರ್ಷಣೆಯಾಗಲಿದೆ.
ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ಮೈಸೂರಿನಲ್ಲಿ ಕಂಬಳ ನಡೆಯಲಿದ್ದು, ಸುಮಾರು 160 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.

ಅಕ್ಟೋಬರ್ 21 ರಂದು ಜಂಬೂಸವಾರಿ
ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ವಿಜಯದಶಮಿ ಜಂಬೂಸವಾರಿ ಅಕ್ಟೋಬರ್ 21ರಂದು ನಡೆಯಲಿದೆ. ಮಧ್ಯಾಹ್ನ 1:36ರಿಂದ 1:56ರವರೆಗಿನ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಬಳಿಕ ಸಂಜೆ 4:10ರಿಂದ 4:35ರವರೆಗಿನ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ನಂತರ ಅರಮನೆ ಆವರಣದಿಂದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದೆ.
ಒಟ್ಟಾರೆ ಅಕ್ಟೋಬರ್ 11ರಿಂದ 21ರವರೆಗೆ ಮೈಸೂರು ದಸರಾ ಸಂಭ್ರಮ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕಂಬಳ, ಡ್ರೋನ್ ಶೋ ಹಾಗೂ ವಿಶ್ವವಿಖ್ಯಾತ ಜಂಬೂಸವಾರಿ ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಲಿವೆ.

MUST WATCH : ನಾಗವಲ್ಲಿಯಲ್ಲಿ ಅದ್ಧೂರಿ ಗಣೇಶೋತ್ಸವ – ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿ




