ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಸ್ಪೀಕರ್ ಆಯ್ಕೆ ಪ್ರಕ್ರಿಯೆಯ ಸುತ್ತ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತೀವ್ರ ಕುತೂಹಲಕರ ಮತ್ತು ನಾಟಕೀಯ ಬೆಳವಣಿಗೆಗಳು ನಡೆದಿವೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ವಿಧಾನಸಭೆ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಸುತ್ತ ಇಂದು ಬೆಳಗ್ಗೆಯಿಂದಲೇ ಹಲವು ನಾಟಕೀಯ ಬೆಳವಣಿಗೆಗಳು ನಡೆದಿವೆ. ಸರ್ಕಾರದ ಮಟ್ಟದಲ್ಲಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಹಂತದಲ್ಲಿ ಕೊನೆ ಕ್ಷಣದವರೆಗೂ ನಡೆದ ಕಸರತ್ತಿನಿಂದಾಗಿ ಸಚಿವರು ಮತ್ತು ಸ್ಪೀಕರ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವು ಬದಲಾವಣೆಗಳಾಗಿವೆ.
ಮೂಲಗಳ ಪ್ರಕಾರ, ಕೆಲವೇ ಗಂಟೆಗಳ ಅವಧಿಯಲ್ಲಿ ಸಚಿವರ ಹಾಗೂ ಸ್ಪೀಕರ್ ಅಭ್ಯರ್ಥಿಗಳ ಪಟ್ಟಿಯನ್ನು ಮೂರು ಬಾರಿ ಪರಿಷ್ಕರಿಸಲಾಗಿದೆ. ಇದರಿಂದಾಗಿ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸ್ಪೀಕರ್ ಆಯ್ಕೆಯಲ್ಲಿ ಕೊನೆ ಕ್ಷಣದ ಬದಲಾವಣೆ
ಬೆಳಿಗ್ಗೆ ಮುಖ್ಯಮಂತ್ರಿ ಕಚೇರಿ ವತಿಯಿಂದ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರ ಹೆಸರನ್ನು ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಅಂತಿಮಗೊಳಿಸಿ ರಾಜ್ಯಪಾಲರಿಗೆ ಶಿಫಾರಸು ಪತ್ರ ಕಳುಹಿಸಲಾಗಿತ್ತು ಎನ್ನಲಾಗಿದೆ.
ಆದರೆ ಕೆಲವೇ ಗಂಟೆಗಳಲ್ಲಿ ಎಐಸಿಸಿ ಮಧ್ಯಪ್ರವೇಶಿಸಿ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಶಿಫಾರಸು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಇದನ್ನು ಓದಿ : ತುಮಕೂರು ಜಿಲ್ಲೆಯ ಸಚಿವಕಾಂಕ್ಷಿಗಳಿಗೆ ಕೊನೆಗೂ ಒಲಿಯಲೇ ಇಲ್ಲ ಮಂತ್ರಿಗಿರಿ

ಸಚಿವರ ಪಟ್ಟಿಯಲ್ಲೂ ಬದಲಾವಣೆ
ಎಐಸಿಸಿ ಬಿಡುಗಡೆ ಮಾಡಿದ ಮೊದಲ ಸಚಿವರ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಪ್ರಕಟವಾಗಿತ್ತು.
ಆದರೆ ನಂತರದ ರಾಜಕೀಯ ಬೆಳವಣಿಗೆಯಲ್ಲಿ, ಮಂಕಾಳು ವೈದ್ಯ ಅವರ ಸ್ಥಾನದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಅವಕಾಶ ಕಲ್ಪಿಸಿ ಎರಡನೇ ಪಟ್ಟಿಯನ್ನು ಹೊರಡಿಸಲಾಯಿತು.
ಮಹಿಳಾ ಕೋಟಾದಡಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ತಮ್ಮ ಆಪ್ತ ನಾಯಕ ಶಿವಣ್ಣನವರ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಗಾಯತ್ರಿ ಶಾಂತೇಗೌಡ ಅವರಿಗೆ ಪ್ರಮಾಣವಚನ ಸ್ವೀಕರಿಸದಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕಾಂಗ್ರೆಸ್ನಲ್ಲಿ ಅಸಮಾಧಾನ
ಸಂಪುಟ ವಿಸ್ತರಣೆಯ ಅಧಿಕೃತ ಪಟ್ಟಿ ಪ್ರಕಟವಾದ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಮತ್ತು ಒಳಜಗಳದ ಚರ್ಚೆಗಳು ತೀವ್ರಗೊಂಡಿವೆ.
ಸಚಿವ ಸ್ಥಾನ ಕೈತಪ್ಪಿದ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಸಂಪುಟ ವಿಸ್ತರಣೆಯೊಂದಿಗೆ ಸರ್ಕಾರಕ್ಕೆ ಹೊಸ ಸಚಿವರ ಸೇರ್ಪಡೆ ನಡೆಯುತ್ತಿದ್ದರೂ, ಕೊನೆ ಕ್ಷಣದ ಬದಲಾವಣೆಗಳು ಕಾಂಗ್ರೆಸ್ನೊಳಗಿನ ರಾಜಕೀಯ ಸಮೀಕರಣಗಳಿಗೆ ಹೊಸ ತಿರುವು ನೀಡಿವೆ.
ಇದನ್ನು ನೋಡಿ : ನಾಳೆ ತುಮಕೂರಿಗೆ VIJAYENDRA VISIT – ಎಲ್ಲೆಲ್ಲಿ ಬರ ಅಧ್ಯಯನ ಪ್ರವಾಸ ಮಾಡ್ತಾರೆ?





