MLC ಸಿಟಿ ರವಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್, ಬಂಧನದಿಂದ ಬಚಾವ್

ನೀಟ್ ಪ್ರತಿಭಟನೆ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಪ್ರಕರಣ ಚಿಕ್ಕಮಗಳೂರಿನಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ.
ಬಲವಂತದ ಕ್ರಮ ಬೇಡ ಎಂದ
ಇದೇ ವೇಳೆ, ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಪ್ರಶ್ನಿಸಿ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ.
ಇದನ್ನು ಓದಿ : ಕಬಡ್ಡಿ ಬೆಟ್ಟಿಂಗ್ ಆರೋಪ ಕೇಸ್ – ಪರಮೇಶ್ವರ್ ವಿರುದ್ಧದ FIR ಗೆ ಹೈಕೋರ್ಟ್ ತಡೆ

ಎಫ್ಐಆರ್ಗೆ ತಡೆ ಕೋರಿ ಅರ್ಜಿ
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ಅಡಿಯಲ್ಲಿ ದಾಖಲಾಗಿರುವ ಎಫ್ಐಆರ್ ಸಂಖ್ಯೆ 149ಕ್ಕೆ ಮಧ್ಯಂತರ ತಡೆ ನೀಡುವಂತೆ ಸಿ.ಟಿ. ರವಿ ಪರ ವಕೀಲರು ಹೈಕೋರ್ಟ್ಗೆ ಮನವಿ ಸಲ್ಲಿಸಿದರು. ವಿಚಾರಣೆ ವೇಳೆ ಸಿ.ಟಿ. ರವಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಈ ಪ್ರಕರಣದಲ್ಲಿ ಮೂರನೇ ವ್ಯಕ್ತಿಯಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಯಾಗಿ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ನೋಟಿಸ್ ನೀಡಲು ತೆರಳಿದ್ದ ಪೊಲೀಸರಿಗೆ ಬೆದರಿಕೆ ಹಾಕಲಾಗಿದೆ ಹಾಗೂ ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸಲಾಗಿದೆ ಎಂದು ವಾದಿಸಿದರು.

MLC ಸಿಟಿ ರವಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ
ಉಭಯಪಕ್ಷಗಳ ವಾದ ಆಲಿಸಿದ ಕರ್ನಾಟಕ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು. ಅಲ್ಲಿಯವರೆಗೆ ಸಿ.ಟಿ. ರವಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಿದೆ.
ಇದನ್ನು ನೋಡಿ : ತುಮಕೂರಿನಲ್ಲಿ ಕೈಕೊಟ್ಟ ಮಳೆರಾಯ – ಎಲ್ಲೆಲ್ಲಿ ಬೆಳೆ ಬೆಳೆದಿದ್ದಾರೆ ಗೊತ್ತಾ.?




