Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್ – ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ!

ಜುಲೈ 28, 2026ರ ಬೆಳಿಗ್ಗೆ 8 ಗಂಟೆಯವರೆಗೆ ರಾಜ್ಯದ ಹವಾಮಾನ ಮುನ್ಸೂಚನೆ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಮುಂಗಾರು ಮತ್ತೆ ಸಾಧಾರಣವಾಗಿ ಚೇತರಿಸಿಕೊಂಡಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುವ ಸಾಧ್ಯತೆ ಇದ್ದರೆ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ
ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುವ ಮುನ್ಸೂಚನೆ ಇದೆ.
ಮಳೆಯ ನಡುವೆ ವಿರಾಮದ ಅವಧಿ ಹೆಚ್ಚಿರಲಿದ್ದು, ಮುಂದಿನ 10 ದಿನಗಳ ಕಾಲ ದಿನಕ್ಕೆ ಸರಾಸರಿ 20 ರಿಂದ 30 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಸದ್ಯ ಭಾರಿ ಮಳೆಯ ಸಾಧ್ಯತೆ ಕಡಿಮೆಯಾಗಿದೆ.

ಮಲೆನಾಡಿನಲ್ಲಿ ಮಳೆ ಮುಂದುವರಿಕೆ
ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಗಡಿ ಭಾಗಗಳಲ್ಲಿ ಮಳೆಯ ಪ್ರಮಾಣ ತುಸು ಹೆಚ್ಚಾಗಬಹುದು.
ಮುಂದಿನ 10 ದಿನಗಳಲ್ಲಿ ಮಳೆ ಮುಂದುವರಿದರೂ, ದಿನ ಕಳೆದಂತೆ ಅದರ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಮತ್ತಷ್ಟು ಬಲಗೊಂಡರೆ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ.
ಇದನ್ನು ಓದಿ : ಕರಾವಳಿಯಲ್ಲಿ ಭಾರಿ ಮಳೆ – ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ಉತ್ತರ ಒಳನಾಡಿನಲ್ಲಿ ಎಲ್ಲೆಲ್ಲೋ ಮಳೆ
ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಉಳಿದ ಜಿಲ್ಲೆಗಳಲ್ಲಿ ಬಿಸಿಲಿನ ಜೊತೆಗೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಮುಂದಿನ ವಾರದಲ್ಲೂ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ.

ದಕ್ಷಿಣ ಒಳನಾಡಿನಲ್ಲಿ ಬಿಸಿಲು–ಮೋಡದ ವಾತಾವರಣ
ಬೆಂಗಳೂರು ನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ. ಜುಲೈ 28ರಿಂದ ಆಗಸ್ಟ್ 1ರವರೆಗೆ ಹೆಚ್ಚಿನ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆ ಇದ್ದು, ಆಗಸ್ಟ್ 2ರಿಂದ ಮತ್ತೆ ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪ್ರಭಾವ
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದಲ್ಲಿ ಮುಂಗಾರು ಮತ್ತೆ ಚೇತರಿಸಿಕೊಂಡಿದೆ.
ಈ ವ್ಯವಸ್ಥೆ ಜಾರ್ಖಂಡ್ ಹಾಗೂ ಮಧ್ಯಪ್ರದೇಶದ ಕಡೆಗೆ ಚಲಿಸುವ ಸಾಧ್ಯತೆ ಇದ್ದು, ಅದರ ಮುಂದಿನ ಬೆಳವಣಿಗೆಗಳ ಮೇಲೆ ರಾಜ್ಯದ ಮಳೆಯ ಪ್ರಮಾಣ ಅವಲಂಬಿತವಾಗಿರಲಿದೆ.
ಒಟ್ಟಾರೆ, ರಾಜ್ಯದಲ್ಲಿ ಸದ್ಯ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಕಡಿಮೆಯಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಹಾಗೂ ಒಳನಾಡಿನಲ್ಲಿ ಬಿಸಿಲು–ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನು ನೋಡಿ : ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಮಾ – ಎರಡು ಬಣಗಳ ನಡುವೆ ಮಾರಾಮಾರಿ..!




