Rain Alert : ಕರಾವಳಿಯಲ್ಲಿ ಭಾರಿ ಮಳೆ; ಉಡುಪಿ, ದಕ್ಷಿಣ ಕನ್ನಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಬಿರುಗಾಳಿಯೊಂದಿಗೆ ಭಾರೀ ಮಳೆ
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಲ್ಲಿ ಜುಲೈ 25ರಿಂದ 30ರವರೆಗೆ, ದಕ್ಷಿಣ ಒಳನಾಡಿನಲ್ಲಿ ಜುಲೈ 24, 25, 28, 29 ಹಾಗೂ 30ರಂದು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಜುಲೈ 24, 28, 29 ಹಾಗೂ 30ರಂದು ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಯೆಲ್ಲೊ ಅಲರ್ಟ್ ಜಾರಿಗೊಳಿಸಲಾಗಿದೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಂಗನವಾಡಿಯಿಂದ ಪಿಯುಸಿ ವರೆಗಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಈ ಕುರಿತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿ : Karnataka Weather : ಜು.3ರಂದು ದಕ್ಷಿಣ ಕನ್ನಡ ಶಾಲಾ-ಕಾಲೇಜುಗಳಿಗೆ ರಜೆ..!!

ಈ ಜಿಲ್ಲೆಗಳಲ್ಲಿ ಸಾಧಾ ರಣ ಮಳೆ
ಇನ್ನೊಂದೆಡೆ, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ, ರಾಯಚೂರು, ಹಾವೇರಿ, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಗಂಟೆಗೆ 30 ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ
ಜುಲೈ 22ರವರೆಗೆ ರಾಜ್ಯದಲ್ಲಿ 253 ಮಿ.ಮೀ. ಮಳೆ ದಾಖಲಾಗಿದ್ದು, ಇದೇ ಅವಧಿಯಲ್ಲಿ ಸಾಮಾನ್ಯವಾಗಿ 392 ಮಿ.ಮೀ. ಮಳೆಯಾಗಬೇಕಿತ್ತು.
ಇದರ ಪರಿಣಾಮವಾಗಿ ರಾಜ್ಯದಲ್ಲಿ ಒಟ್ಟಾರೆ ಶೇ.35ರಷ್ಟು ಮಳೆ ಕೊರತೆ ಉಂಟಾಗಿದೆ.
ಹವಾಮಾನ ತಜ್ಞರ ಪ್ರಕಾರ, ಅರಬ್ಬಿ ಸಮುದ್ರದ ಮೇಲೆ ದುರ್ಬಲ ಗಾಳಿ ಬೀಸುತ್ತಿರುವುದು ಹಾಗೂ ಬಂಗಾಳ ಕೊಲ್ಲಿಯಲ್ಲಿ ಮುಂಗಾರು ವಾಯುಭಾರ ಕುಸಿತ ವ್ಯವಸ್ಥೆ ರೂಪುಗೊಳ್ಳದಿರುವುದು ರಾಜ್ಯದಲ್ಲಿ ಮಳೆ ಕೊರತೆಗೆ ಪ್ರಮುಖ ಕಾರಣಗಳಾಗಿವೆ.
ಆದರೆ ಮುಂದಿನ ಕೆಲವು ದಿನಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಇದನ್ನು ನೋಡಿ : ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಜಾಥಾ – DRUGS ಬೇಡ BRO ಘೋಷಣೆ ಕೂಗಿದ STUDENTS




