Rain Alert : ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಅಬ್ಬರ: ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 50ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಶಾಲೆಗಳಿಗೆ ರಜೆ ಘೋಷಣೆ
ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೆಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹಲವೆಡೆ ನದಿಗಳು ಹಾಗೂ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಹಗುರದಿಂದ ಮಳೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ದಾವಣಗೆರೆ, ಬಳ್ಳಾರಿ, ಚಾಮರಾಜನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಗಂಟೆಗೆ 40ರಿಂದ 60 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇದನ್ನು ಓದಿ : ವಯನಾಡಿನಲ್ಲಿ ಮತ್ತೆ ಭೂಕುಸಿತ – ಮಣ್ಣಿನಡಿ ಹಲವರು ಸಿಲುಕಿರೋ ಶಂಕೆ

ರೆಡ್ ಅಲರ್ಟ್ ಘೋಷಿತ ಜಿಲ್ಲೆಗಳು
ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರೀ ಮಳೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.
ಯೆಲ್ಲೋ ಅಲರ್ಟ್ ಘೋಷಿತ ಜಿಲ್ಲೆಗಳು
ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು, ಬಾಗಲಕೋಟೆ, ಬೀದರ್, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲೂ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆಯ ಆರ್ಭಟ
ಮುಂದಿನ 24 ಗಂಟೆಗಳ ಕಾಲ ರಾಜ್ಯದ ಹಲವೆಡೆ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ. ತಗ್ಗು ಪ್ರದೇಶದ ನಿವಾಸಿಗಳು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು.
ಕರಾವಳಿ ಭಾಗದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಇದನ್ನು ನೋಡಿ : ನಾನು ನಾಡ ಸೇವಕ ನಾಡ ದೊರೆಯಲ್ಲಾ – ನನ್ನನ್ನು ನಾಡ ದೊರೆ ಅಂತ ಕರಿಬೇಡಿ ಎಂದ CM





