ವಾಟ್ಸ್ಆ್ಯಪ್ನಲ್ಲಿ ಇನ್ನು ಮುಂದೆ ಮೆಸೇಜ್ಗೂ ಶುಲ್ಕ – ಅ. 1ರಿಂದ ಹೊಸ ನಿಯಮ

ವಾಟ್ಸಾಪ್ ಬಳಸುವವರಿಗೆ ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಆದರೆ ಈ ಬದಲಾವಣೆ ಸಾಮಾನ್ಯ ವಾಟ್ಸಾಪ್ ಬಳಕೆದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸ್ನೇಹಿತರು, ಕುಟುಂಬದವರು ಹಾಗೂ ಪರಿಚಯಸ್ಥರಿಗೆ ಸಂದೇಶ ಕಳುಹಿಸುವುದು ಎಂದಿನಂತೆ ಉಚಿತವಾಗಿರಲಿದೆ. ಹೊಸ ಶುಲ್ಕ ವ್ಯವಸ್ಥೆ ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ಗ್ರಾಹಕರಿಗೆ ಸಂದೇಶ ಕಳುಹಿಸುವ ಸಂಸ್ಥೆಗಳು ಬಳಸುವ WhatsApp Business Platformಗೆ ಅನ್ವಯಿಸಲಿದೆ.
24 ಗಂಟೆಗಳ ಅವಧಿಯಲ್ಲೂ ಕೆಲವು ಸಂದೇಶಗಳಿಗೆ ಶುಲ್ಕ
ಈವರೆಗೆ ಗ್ರಾಹಕರು ಸಂಸ್ಥೆಯನ್ನು ಸಂಪರ್ಕಿಸಿದ ಬಳಿಕ ಆರಂಭವಾಗುವ 24 ಗಂಟೆಗಳ ಗ್ರಾಹಕ ಸೇವಾ ಅವಧಿಯಲ್ಲಿ ಕೆಲವು ಸೇವಾ ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ಅವಕಾಶವಿತ್ತು.
ಆರ್ಡರ್ ದೃಢೀಕರಣ, ವಿತರಣೆಯ ಮಾಹಿತಿ ಸೇರಿದಂತೆ ಹಲವು ಸಂದೇಶಗಳು ಇದರಲ್ಲಿ ಸೇರಿದ್ದವು.
ಅಕ್ಟೋಬರ್ 1ರಿಂದ 24 ಗಂಟೆಗಳ ಗ್ರಾಹಕ ಸೇವಾ ಅವಧಿ ಮುಂದುವರಿದರೂ, ಈ ಅವಧಿಯಲ್ಲಿ ಕಳುಹಿಸುವ ಕೆಲವು ಸೇವಾ ಮತ್ತು ಬಳಕೆ ಮಾಹಿತಿ ಸಂದೇಶಗಳಿಗೂ ಶುಲ್ಕ ವಿಧಿಸಲಾಗುತ್ತದೆ.

ಒಂದು ಸಂದೇಶಕ್ಕೆ 11.5 ಪೈಸೆ
ಮೆಟಾ ನಿಗದಿಪಡಿಸಿರುವ ದರದಂತೆ ಭಾರತದಲ್ಲಿ ಬಳಕೆ ಮಾಹಿತಿ ಮತ್ತು ಸೇವಾ ಸಂದೇಶಗಳಿಗೆ ಪ್ರತಿ ಸಂದೇಶಕ್ಕೆ ರೂ.0.115 (11.5 ಪೈಸೆ) ಮೂಲ ದರವಿದೆ. 18% ಜಿಎಸ್ಟಿ ಸೇರಿಸಿದರೆ ಇದು ಸುಮಾರು 14 ಪೈಸೆ ಆಗಲಿದೆ. ಈ ಶುಲ್ಕವನ್ನು ಸಂದೇಶ ಸ್ವೀಕರಿಸುವ ಗ್ರಾಹಕರು ಪಾವತಿಸುವುದಿಲ್ಲ. ಸಂದೇಶ ಕಳುಹಿಸುವ ವ್ಯವಹಾರ ಸಂಸ್ಥೆಯೇ ಶುಲ್ಕ ಭರಿಸಬೇಕು.
ಉದಾಹರಣೆಗೆ, ಒಂದು ಸಂಸ್ಥೆ 1,000 ಆರ್ಡರ್ ದೃಢೀಕರಣ ಅಥವಾ ವಿತರಣಾ ಮಾಹಿತಿ ಸಂದೇಶಗಳನ್ನು ಕಳುಹಿಸಿದರೆ, ಮೂಲ ದರದಲ್ಲಿ ರೂ.115 ಶುಲ್ಕವಾಗುತ್ತದೆ. ಜಿಎಸ್ಟಿ ಸೇರಿಸಿದ ಬಳಿಕ ಮೊತ್ತ ಸುಮಾರು ರೂ.135.70 ಆಗಬಹುದು.
ಮೊದಲ 1,000 ಸೇವಾ ಸಂದೇಶ ಉಚಿತ
ವ್ಯವಹಾರಗಳಿಗೆ ಮೊದಲಿನಿಂದಲೇ ಎಲ್ಲಾ ಸಂದೇಶಗಳಿಗೂ ಶುಲ್ಕ ವಿಧಿಸಲಾಗುವುದಿಲ್ಲ. ಪ್ರತಿ ವ್ಯವಹಾರ ದೂರವಾಣಿ ಸಂಖ್ಯೆಗೆ ಪ್ರತಿ ತಿಂಗಳು ಮೊದಲ 1,000 ಸೇವಾ ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ಅವಕಾಶವಿದೆ. 1,000 ಸಂದೇಶಗಳ ಮಿತಿಯನ್ನು ದಾಟಿದ ಬಳಿಕದ ಸೇವಾ ಸಂದೇಶಗಳಿಗೆ ಅನ್ವಯಿಸುವ ದರದಂತೆ ಶುಲ್ಕ ವಿಧಿಸಲಾಗುತ್ತದೆ.
READ THIS : `WhatsApp’ ಬಳಕೆದಾರರೇ ಎಚ್ಚರ – ಈ ಮೆಸೇಜ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

OTP ಸಂದೇಶಕ್ಕೂ ಶುಲ್ಕ
ಲಾಗಿನ್ ಕೋಡ್, OTP ಸೇರಿದಂತೆ ಗ್ರಾಹಕರ ದೃಢೀಕರಣಕ್ಕಾಗಿ ಕಳುಹಿಸುವ ಸಂದೇಶಗಳಿಗೂ ಪ್ರತ್ಯೇಕ ದರವಿದೆ. ಭಾರತದಲ್ಲಿ ಇಂತಹ ಸಂದೇಶಗಳಿಗೆ ಪ್ರತಿ ಸಂದೇಶಕ್ಕೆ ರೂ.0.115 ಮೂಲ ದರ ನಿಗದಿಯಾಗಿದೆ. ಜಿಎಸ್ಟಿ ಸೇರಿಸಿದರೆ ಸುಮಾರು 14 ಪೈಸೆಯಾಗಲಿದೆ.
ಇನ್ನು ರಿಯಾಯಿತಿ, ಮಾರಾಟದ ಕೊಡುಗೆ ಹಾಗೂ ಜಾಹೀರಾತು ಸೇರಿದಂತೆ ಪ್ರಚಾರಾತ್ಮಕ ಸಂದೇಶಗಳಿಗೆ ಹೆಚ್ಚಿನ ಶುಲ್ಕವಿದೆ. ಇಂತಹ ಸಂದೇಶಗಳಿಗೆ ಪ್ರತಿ ತಲುಪಿದ ಸಂದೇಶಕ್ಕೆ ರೂ.0.8631 ಮೂಲ ದರ ಇದ್ದು, ಜಿಎಸ್ಟಿ ಸೇರಿಸಿದರೆ ಸುಮಾರು ರೂ.1.02 ಆಗಬಹುದು.
ಸಾಮಾನ್ಯ WhatsApp ಮತ್ತು ಸಣ್ಣ ವ್ಯಾಪಾರಿಗಳಿಗೆ ಅನ್ವಯಿಸುವುದಿಲ್ಲ
ಈ ಬದಲಾವಣೆ ಸಾಮಾನ್ಯ ವಾಟ್ಸಾಪ್ ಅಪ್ಲಿಕೇಶನ್ ಬಳಸುವವರಿಗೆ ಅನ್ವಯಿಸುವುದಿಲ್ಲ. ಸಣ್ಣ ವ್ಯಾಪಾರಿಗಳು ಸಾಮಾನ್ಯವಾಗಿ ಬಳಸುವ ಪ್ರತ್ಯೇಕ WhatsApp Business Appಗೂ ಈ ಶುಲ್ಕ ನಿಯಮ ಅನ್ವಯಿಸುವುದಿಲ್ಲ. ದೊಡ್ಡ ಪ್ರಮಾಣದ ಗ್ರಾಹಕ ಸಂವಹನ, ಸ್ವಯಂಚಾಲಿತ ಸಂದೇಶಗಳು ಮತ್ತು ವ್ಯವಹಾರಿಕ ಸಂವಹನಕ್ಕಾಗಿ ಬಳಸುವ WhatsApp Business Platform ಮುಖ್ಯವಾಗಿ ಈ ಬದಲಾವಣೆಯ ವ್ಯಾಪ್ತಿಗೆ ಬರುತ್ತದೆ.

ಸೆಪ್ಟೆಂಬರ್ 30ರೊಳಗೆ ಪಾವತಿ ವಿಧಾನ ಸೇರಿಸಬೇಕು
WhatsApp Business Platform ಬಳಸುತ್ತಿರುವ ಸಂಸ್ಥೆಗಳು ಸೆಪ್ಟೆಂಬರ್ 30ರೊಳಗೆ ತಮ್ಮ ಖಾತೆಯಲ್ಲಿ ಪಾವತಿ ವಿಧಾನವನ್ನು ಸೇರಿಸಿಕೊಳ್ಳಬೇಕು.
ಪಾವತಿ ವಿಧಾನವನ್ನು ಹೊಂದಿಸದಿದ್ದರೆ, ಅಕ್ಟೋಬರ್ 1ರಿಂದ ಶುಲ್ಕ ವಿಧಿಸಬೇಕಾದ ಸೇವಾ ಸಂದೇಶಗಳ ವಿತರಣೆಯನ್ನು ನಿಲ್ಲಿಸುವ ಸಾಧ್ಯತೆಯಿದೆ ಎಂದು ಮೆಟಾ ತಿಳಿಸಿದೆ.
MUST WATCH : ತುಮಕೂರು ಪಾಲಿಕೆ ಫುಲ್ ಆಕ್ಟಿವ್ – ಬಾಕಿ ವಸೂಲಿಗೆ ಭರ್ಜರಿ ಕಾರ್ಯಾಚರಣೆ




