
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ತ್ರಿವಳಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲಿವ್-ಇನ್ ಸಂಬಂಧಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಮಗಳೇ ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ತಂಗಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ.
ತಂದೆ, ತಾಯಿ, ತಂಗಿಯನ್ನೇ ಕೊಂದ ಮಗಳು
ಬೆಂಗಳೂರು ಕೆ.ಆರ್. ಪುರಂ ವ್ಯಾಪ್ತಿಯ ಸಿಗೇಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ಈ ಭೀಕರ Murder ನಡೆದಿದ್ದು, ಸೋಮಸುಂದರ್, ಅವರ ಪತ್ನಿ ಮುತ್ತುಲಕ್ಷ್ಮಿ ಹಾಗೂ ಕಿರಿಯ ಪುತ್ರಿ ಸುಪ್ರಿಯಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೃತರ ಹಿರಿಯ ಪುತ್ರಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ವಿರುದ್ಧ ಈ ಕೊಲೆ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ಇಬ್ಬರೂ ಪರಾರಿಯಾಗಿದ್ದಾರೆ.
ಇದನ್ನು ಓದಿ : ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಹರಿದ ನೆತ್ತರು – ಯುವಕನನ್ನು ಕೊಚ್ಚಿ Murder!

ಆಗಿದ್ದೇನು..?
ಆರೋಪಿ ಶ್ವೇತಾ, ಕೆನತ್ ಎಂಬಾತನ ಜೊತೆ ಮದುವೆಯಾಗದೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದಳು. ಮಗಳ ಈ ನಡವಳಿಕೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಗಳಿಗೆ ಬುದ್ಧಿವಾದ ಹೇಳಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಸೋಮಸುಂದರ್ ಅವರು ಪತ್ನಿ ಮತ್ತು ಕಿರಿಯ ಮಗಳೊಂದಿಗೆ ಸಿಗೇಹಳ್ಳಿಯ ಡಾಮ್ನಿಕದ ಲೇಔಟ್ನಲ್ಲಿರುವ ‘ಸಾಯಿ ಗ್ರೀನ್ ಅಪಾರ್ಟ್ಮೆಂಟ್’ಗೆ ಬಂದಿದ್ದರು. ಈ ವೇಳೆ ಪೋಷಕರು ಹಾಗೂ ಶ್ವೇತಾ-ಕೆನತ್ ಜೋಡಿ ನಡುವೆ ತೀವ್ರ ಗಲಾಟೆ ನಡೆದಿದೆ.
ಗಲಾಟೆ ವಿಕೋಪಕ್ಕೆ ತಿರುಗಿದಾಗ ಪ್ರೇಮಿಗಳಿಬ್ಬರೂ ಸೇರಿ ತಂದೆ, ತಾಯಿ ಹಾಗೂ ತಂಗಿಯ ಮೇಲೆ ಚಾಕುವಿನಿಂದ ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡ ಮುತ್ತುಲಕ್ಷ್ಮಿ ಮತ್ತು ಸುಪ್ರಿಯಾ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮನೆಯೊಳಗೆ ಹೆಂಡತಿ, ಕಿರಿಯ ಮಗಳು ಸಾವನ್ನಪ್ಪಿದ್ದರೂ, ತೀವ್ರವಾಗಿ ಗಾಯಗೊಂಡಿದ್ದ ತಂದೆ ಸೋಮಸುಂದರ್ ಹೇಗೋ ಎದ್ದುಬಿದ್ದು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೆ.ಆರ್.ಪುರಂ ವ್ಯಾಪ್ತಿಯ ಮನೆಯೊಂದರಲ್ಲಿ ಕೃತ್ಯ!
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್. ಪುರಂ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನು ಪೊಲೀಸರು ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್ಗಾಗಿ ಜಾಲ ಬೀಸಿದ್ದಾರೆ.
ಕೊಲೆಗೆ ನಿಖರವಾದ ಕಾರಣವೇನು?
ಒಂದೇ ಮನೆಯಲ್ಲಿ ಮೂವರ ಶವಗಳು ಪತ್ತೆಯಾಗಿರುವುದು ಇಡೀ ಸೀಗೆಹಳ್ಳಿ ಪ್ರದೇಶದಲ್ಲಿ ತಲ್ಲಣ ಸೃಷ್ಟಿಸಿದೆ. ಪೊಲೀಸರ ಸಂಪೂರ್ಣ ತನಿಖೆಯ ಬಳಿಕವಷ್ಟೇ ಕೊಲೆಗೆ ನಿಖರವಾದ ಕಾರಣ ಏನೆಂಬುದು ಹೊರಬರಬೇಕಿದೆ.

ಇದನ್ನು ನೋಡಿ : ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ಡೈರಿ ವಿರುದ್ಧ ಅನ್ನದಾತರ ಆಕ್ರೋಶ




