ಒಂದೇ ಕುಟುಂಬದ ಮೂವರು Suicide ಗೆ ಶರಣು – ಆಗಿದ್ದೇನು?

ಮದುವೆ ಸಂಭ್ರಮದಲ್ಲಿದ್ದ ಮನೆ. ಇನ್ನೇನು ಎರಡು ದಿನದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ವಿಧಿಯಾಟ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಸೆಮಣೆ ಏರಬೇಕಿದ್ದ ಮದುಮಗಳು, ಆಕೆಯ ಹೆತ್ತವರು ದಾರುಣವಾಗಿ ಅಂತ್ಯ ಕಂಡಿರೋ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ. ಮದುವೆ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದ್ದು ಸಂಬಂಧಿಕರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕ
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದ ಟ್ರಾಕ್ಟರ್ ಶಿವಣ್ಣ, ನಾಗರತ್ನಮ್ಮ ಹಾಗೂ ಪುತ್ರಿ ರಕ್ಷಿತಾ, ಬಾಳೆ ಹಣ್ಣಿಗೆ ವಿಷ ಬೆರೆಸಿ ತಿಂದು Suicide ಗೆ ಶರಣಾಗಿದ್ದಾರೆ. ಅಂದುಕೊಂಡತೆ ಎಲ್ಲವೂ ಆಗಿದ್ದರೆ ನಾಡಿದ್ದು ಅಂದ್ರೆ ಜೂನ್ 24ರಂದು ಯುವತಿ ರಕ್ಷಿತಾಳ ಮದುವೆ ನಡೆಯಬೇಕಿತ್ತು.
ಇದನ್ನು ಓದಿ : ಪ್ರೀತಿಗೆ ಪೋಷಕರು ನೋ ಅಂದಿದ್ದಕ್ಕೆ ಯುವಕ ಆತ್ಮಹತ್ಯೆ!

ಮದುವೆ ನಿಶ್ಚಯವಾಗಿದ್ದ ಕುಟುಂಬದಲ್ಲಿ ಆಗಿದ್ದೇನು?
ಆದರೆ ಕಿರಾತಕನೊಬ್ಬನ ಕಿರುಕುಳದಿಂದ ಮದುವೆ ಮನೆ ಇದೀಗ ಸೂತಕದ ಮನೆಯಾಗಿದೆ. ಕೆಂಪಯ್ಯನಹುಂಡಿ ಗ್ರಾಮದ ಉಲ್ಲಾಸ್ ಗೌಡ ಎಂಬಾತ ಯುವತಿ ರಕ್ಷಿತಾಗೆ ಕಿರುಕುಳ ಕೊಡ್ತಾ ಇದ್ನಂತೆ.
ಯುವತಿ ರಕ್ಷಿತಾ, ಉಲ್ಲಾಸ್ ಗೌಡಗೆ ಕಳುಹಿಸಿದ್ದ ಮೆಸೇಜ್ ಹಾಗೂ ಕೆಲ ಫೋಟೋಗಳನ್ನು ಇಟ್ಟುಕೊಂಡು ಉಲ್ಲಾಸ್ ಗೌಡ ಕಿರುಕುಳ ಕೊಡ್ತಾ ಇದ್ನಂತೆ..
ಅಲ್ದೇ ರಕ್ಷಿತಾ ಮದುವೆ ನಿಶ್ಚಯವಾಗಿದ್ದ ಗಂಡಿಗೂ ಕೂಡ ಉಲ್ಲಾಸ್ ಫೋಟೋಗಳನ್ನು ಕಳುಹಿಸಿ ಕಿರುಕುಳ ಕೊಟ್ಟಿದ್ದ ಎಂದು ಆರೋಪಿಸಲಾಗಿದೆ.

ಡೆತ್ನೋಟ್ನಲ್ಲಿ ಬಯಲಾಯ್ತು ಅಸಲಿ ಸತ್ಯ!
ಇನ್ನು ಉಲ್ಲಾಸ್ ಗೌಡ ಕೊಡ್ತಿದ್ದ ಮಾನಸಿಕ ಕಿರುಕುಳದಿಂದ ಹಾಗೂ ರಕ್ಷಿತಾ ಜೊತೆ ಮದುವೆ ಮರ್ಯಾದೆಗೆ ಮಾನಕ್ಕೆ ಅಂಜಿದ ತಂದೆ- ತಾಯಿ ಹಾಗೂ ಮಗಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೇ ಕುಟುಂಬದ ಮೂವರ ಸಾವಿಗೆ ಉಲ್ಲಾಸ್ ಗೌಡನೇ ಕಾರಣನೆಂದು ರಕ್ಷಿತಾ ಡೆತ್ನೋಟ್ ಬರೆದಿರೋದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ವರುಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಹಸೆಮಣೆ ಏರಬೇಕಿದ್ದ ಯುವತಿ, ಹೆತ್ತವರು ದುರಂತ ಅಂತ್ಯ ಕಂಡಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಆಂಬುಲೆನ್ಸ್ ತಡೆದು ಗ್ರಾಮಸ್ಥರ ಪ್ರತಿಭಟನೆ
ಇನ್ನು ಕಿರುಕುಳ ಕೊಟ್ಟಿದ್ದ ಉಲ್ಲಾಸ್ ಗೌಡನನ್ನು ಕೂಡಲೇ ಬಂಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಮೃತದೇಹಗಳನ್ನು ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ತಡೆದು ಪ್ರತಿಭಟಿಸಿದ್ರು.
ಸದ್ಯ ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನು ನೋಡಿ : ತುಮಕೂರಿನ ಆ ಶಾಸಕ ಅಡ್ಡ ಮತದಾನ ಮಾಡಿದ್ರಾ?- ಆ ಶಾಸಕ ಯಾರು ಅಂತಾ ನಿಮಗೂ ಗೊತ್ತಾ?



