Shigella ಕಾಟಕ್ಕೆ ಕೇರಳಂ ಕಂಗಾಲು: ಜೂನ್ನಲ್ಲೇ 70 ಸೋಂಕು ಪ್ರಕರಣ ದಾಖಲು – ಏನಿದರ ಲಕ್ಷಣ?

ಕೇರಳದಲ್ಲಿ ಈ ವರ್ಷ ಶಿಗೆಲ್ಲಾ (Shigella) ಸೋಂಕಿನ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದುವರೆಗೆ 146 ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ ಕನಿಷ್ಠ ಐವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ನಿಗಾ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.

146 ಪ್ರಕರಣ, 5 ಸಾವು
ಆರೋಗ್ಯ ಸಚಿವ ಕೆ. ಮುರಳೀಧರನ್ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾರ್ಚ್ ತಿಂಗಳಲ್ಲಿ ಒಬ್ಬರು ಹಾಗೂ ಜೂನ್ ತಿಂಗಳಲ್ಲಿ ನಾಲ್ವರು ಮೃತಪಟ್ಟಿರುವ ಮಾಹಿತಿ ಬಹಿರಂಗಗೊಂಡಿದೆ. ಈ ವರ್ಷದ ಒಟ್ಟು 146 ಪ್ರಕರಣಗಳಲ್ಲಿ 70 ಪ್ರಕರಣಗಳು ಜೂನ್ ತಿಂಗಳಲ್ಲೇ ಪತ್ತೆಯಾಗಿರುವುದು ಆರೋಗ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.
ಜನವರಿಯಿಂದ ಜೂನ್ವರೆಗೆ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಅತಿ ಹೆಚ್ಚು 74 ಪ್ರಕರಣಗಳು ದಾಖಲಾಗಿವೆ. ಮಲಪ್ಪುರಂ ಜಿಲ್ಲೆಯಲ್ಲಿ 25 ಪ್ರಕರಣಗಳು ಹಾಗೂ ಇಬ್ಬರು ಸಾವನ್ನಪ್ಪಿದ್ದಾರೆ. ತಿರುವನಂತಪುರಂ ಜಿಲ್ಲೆಯಲ್ಲಿ 25 ಪ್ರಕರಣಗಳು ವರದಿಯಾಗಿವೆ. ಪತ್ತನಂತಿಟ್ಟ, ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.
ಶಿಗೆಲ್ಲಾ ಎಂದರೇನು?
ಶಿಗೆಲ್ಲಾ ಎನ್ನುವುದು ಬ್ಯಾಕ್ಟೀರಿಯಾದ ಒಂದು ಗುಂಪಾಗಿದ್ದು, ಇದು ಶಿಗೆಲ್ಲೋಸಿಸ್ (Shigellosis) ಎಂಬ ತೀವ್ರ ಅತಿಸಾರ ಸೋಂಕಿಗೆ ಕಾರಣವಾಗುತ್ತದೆ. ಕಲುಷಿತ ಆಹಾರ, ಕುಡಿಯುವ ನೀರು ಹಾಗೂ ಸೋಂಕಿತ ವ್ಯಕ್ತಿಗಳ ಸಂಪರ್ಕದ ಮೂಲಕ ಈ ಸೋಂಕು ವೇಗವಾಗಿ ಹರಡುತ್ತದೆ.

ಸೋಂಕು ಹೆಚ್ಚಾಗಲು ಕಾರಣವೇನು?
ಮಳೆಗಾಲದಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಶಿಗೆಲ್ಲಾ ಸೇರಿದಂತೆ ಹಲವು ನೀರಿನಿಂದ ಹರಡುವ ರೋಗಗಳು ಹೆಚ್ಚಾಗುತ್ತವೆ. ಈ ಬಾರಿ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಳೆಗಾಲದ ಪೂರ್ವಭಾವಿ ಸ್ವಚ್ಛತಾ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ ಎಂಬುದು ಸೋಂಕು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮನೆಯ ಬಾವಿಗಳಲ್ಲಿ ಸಮರ್ಪಕ ಕ್ಲೋರಿನೇಶನ್ ಇಲ್ಲದಿರುವುದು, ಕುಡಿಯುವ ನೀರಿನ ಮೂಲಗಳು ಶೌಚಾಲಯದ ಗುಂಡಿಗಳ ಸಮೀಪದಲ್ಲಿರುವುದು ಹಾಗೂ ಕೆಲವು ಹೋಟೆಲ್ಗಳಲ್ಲಿ ಕಲುಷಿತ ನೀರಿನ ಬಳಕೆ ಸೋಂಕು ಹರಡುವ ಪ್ರಮುಖ ಕಾರಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಗೆಲ್ಲಾ ಸೋಂಕಿನ ಪ್ರಮುಖ ಲಕ್ಷಣಗಳು
- ಅತಿಸಾರ (ಕೆಲವೊಮ್ಮೆ ರಕ್ತ ಮಿಶ್ರಿತ)
- ಹೊಟ್ಟೆನೋವು ಮತ್ತು ಸೆಳೆತ
- ಜ್ವರ
- ವಾಂತಿ ಹಾಗೂ ವಾಕರಿಕೆ
- ಪದೇ ಪದೇ ಮಲ ವಿಸರ್ಜನೆ
- ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಷನ್)
ಇದನ್ನು ಓದಿ : ಕೇರಳದಲ್ಲಿ ಹೊಸ ವೈರಸ್ಗೆ 4 ವರ್ಷದ ಮಗು ಸಾವು

ಸೋಂಕು ಹರಡುವ ವಿಧಾನ
- ಕಲುಷಿತ ಆಹಾರ ಸೇವನೆ
- ಕಲುಷಿತ ಕುಡಿಯುವ ನೀರು
- ಶೌಚಾಲಯ ಬಳಕೆಯ ಬಳಿಕ ಕೈ ತೊಳೆಯದಿರುವುದು
- ಸೋಂಕಿತ ವ್ಯಕ್ತಿಯ ಸಂಪರ್ಕ
- ಸೋಂಕಿತ ಮೇಲ್ಮೈಗಳನ್ನು ಸ್ಪರ್ಶಿಸಿ ಬಾಯಿಗೆ ಕೈ ಹಾಕುವುದು
ಯಾರಿಗೆ ಹೆಚ್ಚು ಅಪಾಯ?
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವೃದ್ಧರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಅಪೌಷ್ಟಿಕತೆಯಿಂದ ಬಳಲುವವರು ಹಾಗೂ ತೀವ್ರ ನಿರ್ಜಲೀಕರಣಕ್ಕೊಳಗಾದವರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.
ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ
ಬಹುತೇಕ ರೋಗಿಗಳು 5ರಿಂದ 7 ದಿನಗಳಲ್ಲಿ ಗುಣಮುಖರಾಗುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು, ORS ಸೇವನೆ ಹಾಗೂ ಸಮರ್ಪಕ ವಿಶ್ರಾಂತಿ ಮುಖ್ಯವಾಗಿದೆ.
ಗಂಭೀರ ಪ್ರಕರಣಗಳಲ್ಲಿ ವೈದ್ಯರ ಸಲಹೆಯ ಮೇರೆಗೆ ಮಾತ್ರ ಆ್ಯಂಟಿಬಯಾಟಿಕ್ಗಳನ್ನು ಬಳಸಬೇಕು.

ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯುವುದು, ಸುರಕ್ಷಿತ ಕುಡಿಯುವ ನೀರು ಬಳಸುವುದು, ಸ್ವಚ್ಛ ಆಹಾರ ಸೇವಿಸುವುದು ಹಾಗೂ ಅಸ್ವಚ್ಛ ಪರಿಸರದಲ್ಲಿ ತಯಾರಿಸಿದ ಆಹಾರವನ್ನು ಸೇವಿಸದಂತೆ ಸಲಹೆ ನೀಡಿದೆ.
ಇದನ್ನು ನೋಡಿ : ಪೈಪ್ ಲೈನ್ ವಿಚಾರಕ್ಕೆ 2 ಗುಂಪುಗಳ ಗಲಾಟೆ – ಅಧಿಕಾರಿಗಳ ಎದುರೇ ಭಾರೀ ಹೈಡ್ರಾಮಾ.!




