
Tamilnadu : 52 ಪ್ರಮುಖ ದೇಗುಲಗಳಲ್ಲಿ ಮೊಬೈಲ್ ನಿಷೇಧ – ಫೋನ್ ಇಡಲು 5 ರೂ. ಶುಲ್ಕ
ತಮಿಳುನಾಡಿನ (Tamilnadu) ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯ 52 ಪ್ರಮುಖ ದೇಗುಲಗಳಲ್ಲಿ ಮೊಬೈಲ್ ಫೋನ್ ಕೊಂಡೊಯ್ಯುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಈ ನಿಯಮ ಸೆಪ್ಟೆಂಬರ್ 1ರಿಂದಲೇ ಜಾರಿಗೆ ಬಂದಿದೆ. ದೇಗುಲಗಳ ಪಾವಿತ್ರ್ಯ ಹಾಗೂ ಶಾಂತ ವಾತಾವರಣವನ್ನು ಕಾಪಾಡುವುದು, ಸೆಲ್ಫಿ, ಫೋಟೊ, ವಿಡಿಯೋ ಮತ್ತು ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಚಿತ್ರೀಕರಣವನ್ನು ತಡೆಯುವುದು ನಿಷೇಧದ ಪ್ರಮುಖ ಉದ್ದೇಶವಾಗಿದೆ.
₹5 ಪಾವತಿಸಿ ಮೊಬೈಲ್ ಠೇವಣಿ
ದೇಗುಲಗಳಿಗೆ ಆಗಮಿಸುವ ಭಕ್ತರು ತಮ್ಮ ಮೊಬೈಲ್ ಫೋನ್ಗಳನ್ನು ಪ್ರವೇಶ ದ್ವಾರಗಳ ಬಳಿ ಸ್ಥಾಪಿಸಲಾಗಿರುವ ಸುರಕ್ಷಿತ ಠೇವಣಿ ಕೇಂದ್ರಗಳಲ್ಲಿ ₹5 ಶುಲ್ಕ ನೀಡಿ ಇಡಬೇಕು. ಮೊಬೈಲ್ ಸ್ವೀಕರಿಸಿದ ಬಳಿಕ ಭಕ್ತರಿಗೆ ರಸೀದಿ ನೀಡಲಾಗುತ್ತದೆ. ದರ್ಶನ ಮುಗಿಸಿ ಮೊಬೈಲ್ ಪಡೆದುಕೊಳ್ಳುವ ವೇಳೆ ರಸೀದಿಯನ್ನು ಪರಿಶೀಲಿಸಿ ಸಾಧನವನ್ನು ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗಿದೆ.
ಕಾಂಚೀಪುರಂನ ಪ್ರಸಿದ್ಧ ದೇವರಾಜಸ್ವಾಮಿ ಅತ್ತಿವರದರ್ ದೇಗುಲದಲ್ಲೂ ಇಂದು ಬೆಳಗ್ಗೆಯಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ. ಭಕ್ತರ ಫೋಟೊ, ಮೊಬೈಲ್ ಮಾದರಿ ಹಾಗೂ ಸಂಖ್ಯೆಯಂತಹ ವಿವರಗಳನ್ನು ದಾಖಲಿಸಿಕೊಂಡು ಫೋನ್ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತಿದೆ.
READ THIS : Tumakuru ಹೆತ್ತೇನಹಳ್ಳಿ ಮಾರಮ್ಮ ದೇವಾಲಯದಲ್ಲಿ ಭಕ್ತರ ವಿಚಿತ್ರ ಹರಕೆಗಳು..!

ನಿಷೇಧ ಜಾರಿಯಾಗಿರುವ ದೇಗುಲಗಳಿವು
ಮೊಬೈಲ್ ನಿಷೇಧ ಜಾರಿಯಾಗಿರುವ ಪ್ರಮುಖ ದೇಗುಲಗಳಲ್ಲಿ:
- ಮದುರೈ ಮೀನಾಕ್ಷಿ ಅಮ್ಮನ್ ದೇಗುಲ
- ಪಳನಿ ದಂಡಾಯುಧಪಾಣಿ ದೇಗುಲ
- ರಾಮೇಶ್ವರಂ ರಾಮನಾಥಸ್ವಾಮಿ ದೇಗುಲ
- ತಿರುಚೆಂದೂರು ಸುಬ್ರಹ್ಮಣ್ಯಸ್ವಾಮಿ ದೇಗುಲ
- ಶ್ರೀರಂಗಂ ರಂಗನಾಥಸ್ವಾಮಿ ದೇಗುಲ
- ತಿರುವಣ್ಣಾಮಲೈ ಅರುಣಾಚಲೇಶ್ವರ ದೇಗುಲ
- ತಿರುವತ್ತಣಿ ಸುಬ್ರಹ್ಮಣ್ಯಸ್ವಾಮಿ ದೇಗುಲ
- ಚೆನ್ನೈನ ಕಪಾಲೀಶ್ವರ ದೇಗುಲ
- ಚೆನ್ನೈನ ಪಾರ್ಥಸಾರಥಿ ದೇಗುಲ
ಸೇರಿದಂತೆ ಒಟ್ಟು 52 ಪ್ರಮುಖ ದೇಗುಲಗಳು ಈ ನಿಯಮದ ವ್ಯಾಪ್ತಿಗೆ ಒಳಪಟ್ಟಿವೆ.
2022ರ ಹೈಕೋರ್ಟ್ ನಿರ್ದೇಶನದ ಹಿನ್ನೆಲೆ
ಈ ನಿರ್ಧಾರವನ್ನು 2022ರಲ್ಲಿ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠ ನೀಡಿದ್ದ ನಿರ್ದೇಶನಕ್ಕೆ ಅನುಗುಣವಾಗಿ ಕೈಗೊಳ್ಳಲಾಗಿದೆ. ದೇಗುಲಗಳಲ್ಲಿ ಫೋಟೊ, ವಿಡಿಯೋ, ಸೆಲ್ಫಿ ಹಾಗೂ ರೀಲ್ಸ್ ಚಿತ್ರೀಕರಣದಿಂದ ಇತರ ಭಕ್ತರಿಗೆ ತೊಂದರೆಯಾಗುತ್ತಿದೆ. ಇದರಿಂದ ದೇಗುಲಗಳ ಆಧ್ಯಾತ್ಮಿಕ ವಾತಾವರಣಕ್ಕೂ ಧಕ್ಕೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಜಾರಿಗೊಳಿಸಲಾಗಿದೆ.

ಸಾಮಾನ್ಯ ಮೊಬೈಲ್ಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ
ಕ್ಯಾಮೆರಾ ಇಲ್ಲದ ಸಾಮಾನ್ಯ ಮೊಬೈಲ್ಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಹಿಂದೂ ಧಾರ್ಮಿಕ ದತ್ತಿ ಸಚಿವ ರಮೇಶ್ ಸ್ಪಷ್ಟಪಡಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ಭಕ್ತರಿಗೆ ನೆರವಾಗಲು ದೇಗುಲ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮೂಲಕ ವ್ಯವಸ್ಥೆ ಮಾಡಲಾಗಿದೆ.
MUST WATCH : ನನ್ನ ಹೆಣದ ಮೇಲೆ ಲಿಂಕ್ ಕೆನಾಲ್ ನೀರು – SURESH GOWDAರ ಮಾತಿಗೆ GOWRISHANKAR ಟಾಂಗ್




