
ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: ಕೆಇಎಯಿಂದ ಬರೋಬ್ಬರಿ 4,699 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ರಾಜ್ಯದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸಿಹಿಸುದ್ದಿ ನೀಡಿದೆ. ವಿವಿಧ ಇಲಾಖೆಗಳಲ್ಲಿನ ಖಾಲಿ ಇರುವ ಪದವಿ, ಪಿಯುಸಿ ಹಾಗೂ ಡಿಪ್ಲೊಮಾ ವಿದ್ಯಾರ್ಹತೆಯ ಒಟ್ಟು 4,699 ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದ ತಾತ್ಕಾಲಿಕ ಅಧಿಸೂಚನಾ ವಿವರಗಳನ್ನು ಕೆಇಎ ಪ್ರಕಟಿಸಿದೆ.
ಅಧಿಕೃತ ಅಧಿಸೂಚನೆ ಸೆಪ್ಟೆಂಬರ್ನಲ್ಲಿ ಪ್ರಕಟ
ಕೆಇಎ ಮಾಹಿತಿ ಪ್ರಕಾರ, ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಸೆಪ್ಟೆಂಬರ್ನಲ್ಲಿ ಪ್ರಕಟವಾಗುವ ನಿರೀಕ್ಷೆಯಿದ್ದು, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಆದರೆ ಅಂತಿಮ ಅಧಿಸೂಚನೆ ಪ್ರಕಟವಾಗುವ ವೇಳೆಗೆ ಹುದ್ದೆಗಳ ಸಂಖ್ಯೆ ಹಾಗೂ ಇಲಾಖೆಗಳ ವಿವರಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.
ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು
ಒಟ್ಟು 2,421 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಪ್ರಮುಖ ಹುದ್ದೆಗಳು ಹೀಗಿವೆ:
- ವಾರ್ಡನ್/ನಿಲಯ ಮೇಲ್ವಿಚಾರಕರು – 705
- ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO)/ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 – 184
- ವಾಣಿಜ್ಯ ತೆರಿಗೆ ಪರಿವೀಕ್ಷಕರು (CTI) – 50
- ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) – 17
- ಸಹಕಾರ ಸಂಘಗಳ ಲೆಕ್ಕಪರಿಶೋಧಕರು – 50
- FDA ಹಾಗೂ ಸಹಾಯಕ ಹುದ್ದೆಗಳು – 900ಕ್ಕೂ ಹೆಚ್ಚು

ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು
ಪಿಯುಸಿ ವಿದ್ಯಾರ್ಹತೆಯ ಅಭ್ಯರ್ಥಿಗಳಿಗಾಗಿ ಒಟ್ಟು 2,062 ಹುದ್ದೆಗಳು ಲಭ್ಯವಿದ್ದು, ಪ್ರಮುಖ ಹುದ್ದೆಗಳು:
- ದ್ವಿತೀಯ ದರ್ಜೆ ಸಹಾಯಕರು (ವಾಣಿಜ್ಯ ತೆರಿಗೆ ಇಲಾಖೆ) – 590
- ಗ್ರಾಮ ಪಂಚಾಯಿತಿ ಕಾರ್ಯದರ್ಶಿ/ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 – 322
- ದ್ವಿತೀಯ ದರ್ಜೆ ಸಹಾಯಕರು (RDPR) – 309
- ಕಿರಿಯ ಲೆಕ್ಕ ಸಹಾಯಕರು – 223
- ಲೋಕಾಯುಕ್ತ, ಸಾರಿಗೆ, KPSC, ಅರಣ್ಯ, ಮುದ್ರಾಂಕ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ SDA/ಕಿರಿಯ ಸಹಾಯಕ ಹುದ್ದೆಗಳು – 600ಕ್ಕೂ ಹೆಚ್ಚು
READ THIS : KEA ನೇಮಕಾತಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಡಿಪ್ಲೊಮಾ ಅಭ್ಯರ್ಥಿಗಳಿಗೆ ಅವಕಾಶ
ಡಿಪ್ಲೊಮಾ ವಿದ್ಯಾರ್ಹತೆಯ ಅಭ್ಯರ್ಥಿಗಳಿಗಾಗಿ ಒಟ್ಟು 216 ತಾಂತ್ರಿಕ ಹುದ್ದೆಗಳನ್ನು ಗುರುತಿಸಲಾಗಿದೆ.
- ಸಹಾಯಕ ನಗರ ಯೋಜಕರು – 119
- ಜೂನಿಯರ್ ಇಂಜಿನಿಯರ್ (ಸಿವಿಲ್), ಗ್ರೇಟರ್ ಬೆಂಗಳೂರು ಪ್ರಾಧಿಕಾರ – 50
- ಜೂನಿಯರ್ ಇಂಜಿನಿಯರ್ (ಸಿವಿಲ್), ಗೃಹ ಮಂಡಳಿ – 20
- ಜೂನಿಯರ್ ಇಂಜಿನಿಯರ್ (ಸಿವಿಲ್), ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ – 15
- ಜೂನಿಯರ್ ಇಂಜಿನಿಯರ್, ಗಣಿ ಮತ್ತು ಭೂವಿಜ್ಞಾನ/ಅಂತರ್ಜಲ ಇಲಾಖೆ – 9
- ಪ್ಲಾರೂಪಕರು, ಕೊಳಗೇರಿ ಅಭಿವೃದ್ಧಿ ಮಂಡಳಿ – 2
- ಜೂನಿಯರ್ ಇಂಜಿನಿಯರ್ (ಸಿವಿಲ್), ಕೃಷಿ ಮಾರಾಟ ಇಲಾಖೆ – 1

ಎರಡು ಪತ್ರಿಕೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ
ಪದವಿ ಮತ್ತು ಪಿಯುಸಿ ಮಟ್ಟದ ಹುದ್ದೆಗಳಿಗೆ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) ನಿಯಮಗಳು, 2021ರ ಅನ್ವಯ ಪರೀಕ್ಷೆ ನಡೆಯಲಿದೆ. ಪತ್ರಿಕೆ-1ರಲ್ಲಿ ಸಾಮಾನ್ಯ ಜ್ಞಾನ ಹಾಗೂ ಪತ್ರಿಕೆ-2ರಲ್ಲಿ ಸಂವಹನ/ವಿಷಯಾಧಾರಿತ ಪ್ರಶ್ನೆಗಳು ಇರಲಿವೆ.
ತಾಂತ್ರಿಕ ಹುದ್ದೆಗಳ ಅಭ್ಯರ್ಥಿಗಳಿಗೆ ಪತ್ರಿಕೆ-1 ಸಾಮಾನ್ಯ ಪತ್ರಿಕೆಯಾಗಿದ್ದು, ಪತ್ರಿಕೆ-2ರಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವ ಹುದ್ದೆಗೆ ಸಂಬಂಧಿಸಿದ ನಿರ್ದಿಷ್ಟ ತಾಂತ್ರಿಕ ವಿಷಯಗಳ ಪ್ರಶ್ನೆಗಳು ಇರಲಿವೆ.
ಅಂತಿಮ ಅಧಿಸೂಚನೆಯೇ ಅಧಿಕೃತ
ಸದ್ಯ ಪ್ರಕಟವಾಗಿರುವುದು ತಾತ್ಕಾಲಿಕ ಅಧಿಸೂಚನಾ ವಿವರವಾಗಿದ್ದು, ಅಂತಿಮ ಅಧಿಸೂಚನೆ ಪ್ರಕಟಿಸುವ ವೇಳೆಗೆ ಹುದ್ದೆಗಳ ಸಂಖ್ಯೆ, ಇಲಾಖೆಗಳ ವಿವರ ಸೇರಿದಂತೆ ಇತರೆ ಮಾಹಿತಿಯಲ್ಲಿ ಬದಲಾವಣೆಯಾಗಬಹುದು. ಹೀಗಾಗಿ ಅಭ್ಯರ್ಥಿಗಳು ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕ ಅರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಪರೀಕ್ಷಾ ದಿನಾಂಕ ಹಾಗೂ ಪಠ್ಯಕ್ರಮದ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ kea.kar.nic.in ಅನ್ನು ಪರಿಶೀಲಿಸಬಹುದು.

MUST WATCH : ಪೋನ್ ಕದ್ದಾಲಿಕೆ ಆಗಲೇ ಏನು ಆಗ್ಲಿಲ್ಲ- HDK ಹೇಳಿಕೆಗೆ GUBBI VASANNA ವ್ಯಂಗ್ಯ.!




